ಹೊಟೇಲ್, ಬಾರ್, ಬೇಕರಿ ಮೇಲೆ ರುದ್ರಮುನಿ ದಾಳಿ, ಎಚ್ಚರಿಕೆ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಜೂ. 23
ನೈರ್ಮಲ್ಯ ಹದಗೆಟ್ಟು ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರಿಗಳು ನಗರದಲ್ಲಿರುವ ಹೊಟೇಲ್ಗಳು, ಬಾರುಗಳು ಮತ್ತು ಬೇಕರಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಕಳೆದೊಂದು ವಾರದ ಹಿಂದೆ ನಗರಸಭೆ ಪೌರಾಯುಕ್ತ ರುದ್ರಮುನಿ, ಹೊಟೇಲ್ಗಳಲ್ಲಿ ಯಾವ ರೀತಿ ಸ್ವಚ್ಛತೆ ಕಾಪಾಡಿಕೊಂಡು ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಕಾರ್ಯಾಚರಣೆ ಕೈಗೊಂಡಿದ್ದರು. ಸ್ವಚ್ಛತೆಯ ಬಗ್ಗೆ ಖುದ್ದು ತಿಳಿದುಕೊಂಡು ನಿರ್ಲಕ್ಷ್ಯ ವಹಿಸಿದ್ದ ಮಾಲೀಕರುಗಳಿಗೆ ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ಹೊಟೇಲ್ಗಳು ಸ್ವಚ್ಛತೆ ಕಾಪಾಡಿರಲಿಲ್ಲ. ಈ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾನುವಾರ ರುದ್ರಮುನಿ ಮತ್ತು ನಗರಸಭೆ ಸಿಬ್ಬಂದಿ ಪ್ರಮುಖ ಹೊಟೇಲ್ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.
ಈ ಹಿಂದೆ ಕೊಳಕಿನ ವಾತಾವರಣದಿಂದ ಕೂಡಿದ್ದ ಕಾರಣಕ್ಕೆ ಛೀಮಾರಿಗೆ ಗುರಿಯಾಗಿದ್ದ ನಗರದ ಹಿಂದೂಸ್ತಾನ್ ಹೊಟೇಲ್ ಮೇಲೆ ಈಗಲೂ ಸ್ವಚ್ಛತೆ ಕಾಪಾಡದೇ ನಿರ್ಲಕ್ಷ್ಯ ವಹಿಸಿರುವುದಕ್ಕೆ ಗರಂ ಆದರು.
ಅಲ್ಲದೇ ಗೃಹೋಪಯೋಗಿ ಅಡುಗೆ ಅನಿಲ ಸಿಲಿಂಡರುಗಳನ್ನು ಅಕ್ರಮವಾಗಿ ಹೊಟೇಲ್ನಲ್ಲಿ ಬಳಕೆ ಮಾಡುತ್ತಿರುವುದು ಪತ್ತೆಯಾಯಿತು.
ತಕ್ಷಣ ತಹಸೀಲ್ದಾರ್ ನಟೇಶ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡ ಪೌರಾಯುಕ್ತರು, ಹೊಟೇಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 3 ಅಡುಗೆ ಅನಿಲ ಸಿಲಿಂಡರುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಹೀಗೆ ನಿರ್ಲಕ್ಷ್ಯ ವಹಿಸುತ್ತ ಕಾನೂನು ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡು ಹೋದರೆ ಹೊಟೇಲ್ ಪರವಾನಗಿಯನ್ನು ರದ್ದುಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಹೊಟೇಲ್ ಆಮಂತ್ರಣ ಸೇರಿದಂತೆ ನಗರದ ಹಳೆಯ ಬಸ್ ನಿಲ್ದಾಣ ಸಮೀಪವಿರುವ ಹೊಟೇಲ್ಗಳಲ್ಲೂ ಪರಿಶೀಲನೆ ನಡೆಸಲಾಯಿತು.
ಬೇಕರಿ, ಬಾರ್ ಮೇಲೆ ದಾಳಿ: ಬಳಿಕ ಬೇಕರಿಗಳ ಮೇಲೆ ದಾಳಿ ನಡೆಸಿದರು. ಕರ್ನಾಟಕ ಬೇಕರಿ, ವೋವನ್ ಫ್ರೆಶ್ ಬೇಕರಿ, ಡೆಲ್ಲಿ ಚಾಟ್ಸ್ ಬೇಕರಿಯಲ್ಲಿ ತಪಾಸಣೆ ನಡೆಸಲಾಯಿತು. ಅಕ್ರಮವಾಗಿ ಬಳಕೆ ಮಾಡುತ್ತಿದ್ದ 40 ಮೆಕ್ರಾನ್ಗಿಂತ ಕಡಿಮೆ ಸಾಮರ್ಥ್ಯ ಪ್ಲಾಸ್ಟಿಕ್ ಲೋಟಗಳು, ಕವರುಗಳನ್ನು ವಶಪಡಿಸಿಕೊಳ್ಳಲಾಯಿತು.
ನಂತರ ಕಾರ್ಯಾಚರಣೆ ಬಾರುಗಳತ್ತ ತಿರುಗಿತು. ಚಾಲುಕ್ಯ ಬಾರ್ ಮೇಲೆ ದಾಳಿ ನಡೆಸಿ ಸ್ವಚ್ಛತೆ ಕಾಪಾಡಲು ಸೂಚಿಸಲಾಯಿತು.
ಪೌರಾಯುಕ್ತರ ನುಡಿ: ಸ್ವಚ್ಛತೆ ಕಾಪಾಡದೇ ಇದ್ದಾಗ ಸುಲಭವಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಈ ಹಿನ್ನೆಲೆಯಲ್ಲಿ ಹೊಟೇಲ್, ಬೇಕರಿ ಮತ್ತು ಬಾರುಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಕಟ್ಟುನಿಟ್ಟಾಗಿ ಮುಂದಾಗುವಂತೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಪೌರಾಯುಕ್ತ ರುದ್ರಮುನಿ ತಿಳಿಸಿದರು.
ನಗರಸಭೆ ಅನಿರೀಕ್ಷಿತವಾಗಿ ದಾಳಿಯನ್ನು ನಡೆಸುತ್ತಿದ್ದು ಪ್ರಸ್ತುತ ಕೇವಲ ನೋಟೀಸ್ ಮೂಲಕ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಒಂದು ವೇಳೆ ನಿರ್ಲಕ್ಷ್ಯವನ್ನು ಮುಂದುವರೆಸಿಕೊಂಡು ಹೋದಲ್ಲಿ ದಂಡ ವಿಧಿಸುವುದು, ಹೊಟೇಲ್ ಪರವಾನಗಿಯನ್ನು ರದ್ದು ಮಾಡುವ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಆರೋಗ್ಯಾಧಿಕಾರಿ ಈರಣ್ಣ, ಸಿಬ್ಬಂದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.