ಹೊಸ ಮಹಿಳಾ ರಕ್ಷಣಾ ಕಾನೂನು ತನ್ನಿ
ಚಿಂತಾಮಣಿ: ರಾಷ್ಟ್ರದಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಸರ್ಕಾರ ಕಠಿಣ ಕ್ರಮ ಜಾರಿಗೊಳಿಸಿ ಮಹಿಳೆಗೆ ಸೂಕ್ತ ರಕ್ಷಣೆ ಕಲ್ಪಿಸಲು ಹೊಸ ಕಾನೂನನ್ನು ಜಾರಿಗೆ ತರಲು ಮುಂದಾಗಬೇಕೆಂದು ಉಡುಪಿ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಸಿ. ಅಶ್ವಥಮ್ಮ ನುಡಿದರು.
ಪಟ್ಟಣದಲ್ಲಿ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಹಿಳಾ ಗೋಷ್ಠಿಯಲ್ಲಿ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರದ ಬಗ್ಗೆ ಮಂಡನೆ ಮಾಡಿ ನುಡಿದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಸಿದ್ಧಾಂತಗಳು ವೇದಿಕೆಯ ಮೇಲೆ ಭಾಷಣವಾಗಿಯೇ ಉಳಿದಿದೆ. ಇಂದಿಗೂ ಮಹಿಳೆಗೆ ಸ್ವತಂತ್ರವಿಲ್ಲದೆ ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಿದ ಪ್ರಕರಣಗಳು ಮಾಧ್ಯಮಗಳಲ್ಲಿ ನಾವೆಲ್ಲರೂ ನಿತ್ಯ ಕೇಳುತ್ತಿದ್ದೇವೆ ಎಂದು ಹೇಳಿದರು.
ವಿಶ್ವದಲ್ಲಿಯೇ ಹೆಣ್ಣಿನ ಸ್ಥಾನಮಾನ ಬಗ್ಗೆ ಭಾರತ ದೇಶದಲ್ಲಿ ಪೂಜಿಸುವ ಹಾಗೂ ಗೌರವಿಸುವ ಸಂಪ್ರದಾಯ ನಮ್ಮದು ಹಾಗಾಗಿ ಹೆಣ್ಣು ಹಾಗೂ ಗಂಡು ಎಂಬ ಲಿಂಗ ತಾರತಮ್ಯ ಇಲ್ಲದೆ ಎಲ್ಲರೂ ಸಮಾನರು ಎಂದು ಭಾವಿಸಬೇಕೆಂದು ಸಭೆಯಲ್ಲಿ ಮಂಡಿಸಿದರು. ನಂತರ ವಕೀಲರಾದ ರೂಪ ಶ್ರೀ, ಮಹಿಳಾ ಮತ್ತು ಕಾನೂನು ವಿಷಯದ ಬಗ್ಗೆ ಸಭೆಯಲ್ಲಿ ಸವಿಸ್ತಾರವಾಗಿ ಪ್ರಸ್ತಾಪ ಮಾಡಿ ಮಂಡಿಸಿದರು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ತಳಗವಾರ ಗ್ರಾಮ ಪಂಚಾಯಿತಿ ಅಧಿಕಾರಿ ಕವಿತ ಹಾಗೂ ಶಿಕ್ಷಕಿ ಮಂಜುಭಾರ್ಗವಿ, ಕಸಾಪ ಪ್ರತಿನಿಧಿಗಳಾದ ಜಯಲಕ್ಷ್ಮಮ್ಮ, ಚಂದ್ರಮ್ಮ, ಮಣಿಲ ಸೇರಿದಂತೆ ಇನ್ನೂ ಹಲವರು ಮಹಿಳಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪುರಂದರದಾರ ಕೀರ್ತನೆಗೆ ಅವಮಾನ...: ಚಿಂತಾಮಣಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಸ್ಯ ಕಲಾವಿದರಾದ ರಿಚರ್ಡ್ ಲೂಯಿಸ್ ತಂಡ ಪುರಂದರ ದಾಸರ ಖ್ಯಾತ ಕೀರ್ತನೆ ಭಾಗ್ಯದಾ ಲಕ್ಷ್ಮೀ ಬಾರಮ್ಮ ಕೀರ್ತನೆಯನ್ನು ಅಪಹಾಸ್ಯ ಮಾಡುತ್ತಾ ವಿಡಂಬನೆಗೆ ಗುರಿ ಮಾಡಿದ್ದನ್ನು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ತೀವ್ರವಾಗಿ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇವರು ಕನ್ನಡ ಸಾಹಿತ್ಯದಲ್ಲಿ ಭಕ್ತಪಂಥದ ದಾಸವರೇಣ್ಯರ ಕನ್ನಡದ ಹಾಡುಗಳನ್ನು ಹಾಸ್ಯಗಾರರು ವಿಡಂಬಣೆಗೆ ಬಳಸಿಕೊಳ್ಳುವುದನ್ನು ಬಿಡಬೇಕು. ನವಕೋಟಿ ನಾರಾಯಣ ಎಂದು ಬಿರುದು ಪಡೆದಿದ್ದ ಪುರಂದರ ದಾಸರು ಇವರು ಸಂಪತ್ತನ್ನೆಲ್ಲಾ ದಾನ ಮಾಡಿ ದಾಸರಾದಂತಹವರು. ಅಂತಹವರ ಬದುಕು ಆದರ್ಶ ಇಂತಹ ದಾಸರನ್ನು ಅಪಹಾಸ್ಯ ಮಾಡುತ್ತಾ ಹಾಸ್ಯಗಾರರು ಹಣ ಮಾಡುವುದು ಎಷ್ಟು ಸರಿ ಎಂದರು.