ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
ಕೋಲಾರ: ಮಾಲೂರು ತಾಲೂಕಿನ ಮಾಲೂರು-ಹೊಸಕೋಟೆ ರಸ್ತೆಯ ಯಶವಂತಪುರ ಗೇಟ್ ಬಳಿ ಮಾರುತಿ ಕಾರು ಡಿಕ್ಕಿಯಿಂದ ಗಾಯಗೊಂಡಿದ್ದ ಮೋಟಾರ್ಬೈಕ್ ಸವಾರ, ಮಾಲೂರಿನ ಮಲ್ಯಾದ್ರಿ ರೆಡ್ಡಿ ಚಿಕಿತ್ಸೆ ಫಲಕಾರಿ ಆಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶನಿವಾರ ರಾತ್ರಿ 8 ಗಂಟೆ ಸಮಯದಲ್ಲಿ ಮಲ್ಯಾದ್ರಿ ರೆಡ್ಡಿ ಎಂಬುವರು ಮಾಲೂರು-ಹೊಸಕೋಟೆ ರಸ್ತೆಯ ಯಶವಂತಪುರ ಗೇಟ್ ಬಳಿ ಹೀರೋಹೋಂಡಾ ಸ್ಪ್ಲೆಂಡರ್ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಮಾರುತಿ ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ದ್ವಿಚಕ್ರವಾಹನ ಸವಾರ ಮಲ್ಯಾದ್ರಿ ರೆಡ್ಡಿ ತೀವ್ರವಾಗಿ ಗಾಯಗೊಂಡಿದ್ದರು.
ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಕಾರಿನ ಚಾಲಕ ತನ್ನ ವಾಹನದೊಂದಿಗೆ ಪರಾರಿಯಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.