ಆಸ್ತಿ ವಿವರ ಇನ್ನು ಆನ್ಲೈನ್ನಲ್ಲಿ
ಪಾ.ಶ್ರೀ.ಅನಂತರಾಮ್
ಕ.ಪ್ರ.ವಾರ್ತೆ ಕೋಲಾರ ಜೂ. 24
ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದ ನಮೂನೆ-9 ಮತ್ತು 11ನ್ನು ಇನ್ನು ಮುಂದೆ ಗ್ರಾಪಂ ಕಾರ್ಯದರ್ಶಿಗಳು ಕೈಬರಹದಲ್ಲಿ ವಿತರಿಸುವುದನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಇದರಿಂದಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ನಿಜವಾದ ಮಾಲೀಕನಿಗೆ ಬೇರೊಬ್ಬರಿಂದ ಆಗುತ್ತಿದ್ದ ವಂಚನೆ, ಆಸ್ತಿ ಕಬಳಿಕೆಗೆ ಕಡಿವಾಣ ಬಿದ್ದಂತಾಗಿದೆ.
ಗ್ರಾಪಂ ವ್ಯಾಪ್ತಿಯ ಆಸ್ತಿಗಳ ನಿಜವಾದ ಮಾಲೀಕ ಹಾಗೂ ವಾರಸುದಾರರು ಯಾರು ಎಂಬುದರ ಮಾಹಿತಿಯನ್ನು ಇಷ್ಟು ದಿನ ಗ್ರಾಪಂ ಕಾರ್ಯದರ್ಶಿಗಳು ಕೈಬರಹ ಮುಖಾಂತರ ಹಾಗೂ ಹಳೆ ನಮೂನೆಯಲ್ಲಿ ಫಾರಂ ನಂ-9 ಮತ್ತು 11ನ್ನು ವಿತರಿಸುತ್ತಿದ್ದರಿಂದ ಆಸ್ತಿ ಮಾರಾಟದಲ್ಲಿ ಸಾಕಷ್ಟು ಲೋಪ, ವಂಚನೆ ಆಗುತ್ತಿತ್ತು. ಇನ್ನು ಮುಂದೆ ಹಳೆ ಪದ್ಧತಿ ಕೈಬಿಟ್ಟು ಆನ್ಲೈನ್ ಮೂಲಕ ಆಸ್ತಿ ಮಾಲೀಕನಿಗೆ ವಿವರ ಒದಗಿಸಲು ಇ-ಸ್ವತ್ತು ತಂತ್ರಾಂಶದ ಬಳಕೆ ಮಾಡಲು ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಯಾವುದೇ ಒಂದು ಕುಟುಂಬದಲ್ಲಿ ಮನೆ, ಜಮೀನು ಅಥವಾ ಇನ್ಯಾವುದೇ ಆಸ್ತಿಗೆ ಮಾಲೀಕನಾಗಿದ್ದಲ್ಲಿ ಅವುಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ ಗ್ರಾಪಂನಲ್ಲಿ ದಾಖಲು ಮಾಡಬೇಕು. ಇದರಿಂದ ಬೇರೊಬ್ಬರ ಆಸ್ತಿ ಕಬಳಿಸುವುದಕ್ಕೆ ಯಾರೂ ಧೈರ್ಯ ಮಾಡಲು ಸಾಧ್ಯವಾಗುವುದಿಲ್ಲ.
ಸರ್ಕಾರದ ದಿಟ್ಟ ನಿರ್ಧಾರ: ಸರ್ಕಾರ ಈ ರೀತಿಯ ಅಕ್ರಮ ತಡೆಗಟ್ಟಬೇಕೆಂದು ದಿಟ್ಟ ನಿರ್ಧಾರ ಕೈಗೊಂಡು ಗ್ರಾಪಂ ವ್ಯಾಪ್ತಿಯ ಎಲ್ಲ ರೀತಿಯ ಆಸ್ತಿಗಳನ್ನು ಕಂಪ್ಯೂಟರ್ನಲ್ಲಿ ದಾಖಲು ಮಾಡಿ, ಮಾಲೀಕನ ಫೋಟೋ, ವಂಶವೃಕ್ಷ, ಆಸ್ತಿ ವಿವರಗಳಿಗೆ ಸಂಬಂಧಿಸಿದ ದಾಖಲೆಗಳು, ಕುಟುಂಬ ಸದಸ್ಯರ ವಿವರ, ಆಸ್ತಿಯ ವಾರಸುದಾರರು ಯಾರು, ತೆರಿಗೆ ಪಾವತಿಗೆ ಸಂಬಂಧಿಸಿದ ರಸೀದಿ, ಭೂಪರಿವರ್ತನೆಯ ದಾಖಲೆ ಹಾಗೂ ಬಾಡಿಗೆ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ಆನ್ಲೈನ್ನಲ್ಲಿ ನೋಂದಾಯಿಸಿ ಫಾರಂ-9 ಮತ್ತು 11ನ್ನು ಪಡೆಯಬೇಕಾಗಿದೆ. ಹೀಗೆ ಮಾಡುವುದರಿಂದ ಬೇರೆಯವರ ಆಸ್ತಿಯನ್ನು ತಮ್ಮದೇ ಎಂದು ಸಬ್ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮಾರಾಟ ಇಲ್ಲವೇ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ!
ಈ ಹಿಂದೆ ಸಬ್ರಿಜಿಸ್ಟ್ರಾರ್ ಕಚೇರಿಯವರು ಆಸ್ತಿಗಳ ಮಾರಾಟ ಮತ್ತು ಖರೀದಿಗೆ ಗ್ರಾಪಂಗಳಿಂದ ಕೈಬರಹದಲ್ಲಿ ನೀಡುವ ಮಾಲೀಕನೆಂದು ಸಾಬೀತು ಮಾಡುವ ಫಾರಂ ನಂ.9 ಮತ್ತು ಕಂದಾಯ ಪಾವತಿಗೆ ಸಂಬಂಧಿಸಿದ ರಸೀದಿ ನಮೂದಿಸುವ ಫಾರಂ 11ನ್ನು ನೀಡುವಂತೆ ತಿಳಿಸಲಾಗಿತ್ತು. ಇದರಲ್ಲೂ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿದ್ದರಿಂದ ಸರ್ಕಾರ ಇ-ಸ್ವತ್ತು ತಂತ್ರಾಂಶ ತಂದಿದೆ.
ಇ-ಸ್ವತ್ತು ತಂತ್ರಾಂಶ ತರಬೇತಿ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಯ ಆಧೀನ ಕಾರ್ಯದರ್ಶಿ ಮಾರ್ಗರೇಟ್ ಟೀನಾ ನರೋನ್ಹ ಅವರು 2013ರ ಜೂ.15ರಂದು ಎಲ್ಲ ಜಿಲ್ಲೆಗಳ ಜಿಪಂ ಸಿಇಒಗಳು, ತಾಪಂ ಇಒಗಳು, ಗ್ರಾಪಂ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿ, ಇ-ಸ್ವತ್ತು ತಂತ್ರಾಂಶದ ಬಗ್ಗೆ ತರಬೇತಿ ಪಡೆಯಲು ಸೂಚಿಸಿದ್ದಾರೆ.
ಇ-ಸ್ವತ್ತು ತಂತ್ರಾಂಶದ ಬಗ್ಗೆ ತರಬೇತಿ ಪಡೆಯುವವರು ಆಸ್ತಿ ವಿವರಕ್ಕಾಗಿ ಅರ್ಜಿ ಸಲ್ಲಿಸುವವರಿಂದ ಸರ್ಕಾರ ಸೂಚಿಸಿರುವಂಥ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಅದನ್ನು ಆನ್ಲೈನ್ನಲ್ಲಿ ದಾಖಲು ಮಾಡಿ ಅರ್ಜಿದಾರನಿಗೆ ಪ್ರಿಂಟ್ ಔಟ್ ನೀಡುವುದು ಕಡ್ಡಾಯ. ಇದನ್ನು ನೀಡಿದಲ್ಲಿ ಮಾತ್ರ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಕಾರ್ಯ ಸುಲಭವಾಗಲಿರುವುದರಿಂದ ಅಧಿಕಾರಿಗಳು ತರಬೇತಿ ಪಡೆಯುವುದಕ್ಕೆ ಮುಂದಾಗಿದ್ದಾರೆ.
ಹೇಗೆ ನಿರ್ವಹಣೆ?: ಅರ್ಜಿದಾರರು ಮೊದಲು ದಾಖಲೆಗಳನ್ನು ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ನೀಡಬೇಕು. ಅದನ್ನು ಗ್ರಾಪಂ ಕಾರ್ಯದರ್ಶಿ ಪರಿಶೀಲಿಸಿದ ನಂತರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಂಗೀಕರಿಸಬೇಕು. ಬಳಿಕವೇ ಆನ್ಲೈನ್ನಲ್ಲಿ ಎಲ್ಲ ದಾಖಲಾತಿ ದಾಖಲು ಮಾಡಿ, ಸಂಬಂಧಪಟ್ಟ ಅಧಿಕಾರಿಯ ಡಿಜಿಟಲ್ ಸಹಿಯುಳ್ಳ ಪ್ರಿಂಟ್ ಔಟ್ ನೀಡಬೇಕಾಗಿದೆ. ಸಾರ್ವಜನಿಕರು ಫಾರಂ-9 ಮತ್ತು 11ರ ವಿವರಗಳನ್ನು ಇ-ಸ್ವತ್ತು ತಂತ್ರಾಂಶದಲ್ಲಿ ಯಾವುದೇ ಲಾಗಿನ್ ಮತ್ತು ಪಾಸ್ವರ್ಡ್ ಬಳಸದೆ ನೇರವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹೊಸ ಕಾರ್ಯಕ್ರಮದ ಯಶಸ್ವಿ ಅನುಷ್ಠಾನದ ಜವಾಬ್ದಾರಿಯನ್ನು ಸರ್ಕಾರ ಜಿಪಂ ಸಿಇಒಗಳಿಗೆ ವಹಿಸಿದೆ