ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಡಿವ ನೀರಿಗಾಗಿ ಪ್ರತಿಭಟನೆ

Rashmi Kasaragodu
Updated On : 25 Jun 2013, 12:37 pm

ಶಿಡ್ಲಘಟ್ಟ: ಪಟ್ಟಣದ ಎಂಟು ಮತ್ತು ಒಂಬತ್ತನೇ ವಾರ್ಡ್‌ನ ಜನರು ಕುಡಿಯುವ ನೀರು, ಚರಂಡಿ ತುಂಬ ತ್ಯಾಜ್ಯ ತೆಗೆಯದೆ ನಿರ್ಲಕ್ಷಿಸಿರುವುದನ್ನು ಪ್ರತಿಭಟಿಸಿ ಪುರಸಭೆಯ ಮುಂದೆ ಖಾಲಿ ಬಿಂದಿಗೆ ಪ್ರದರ್ಶಿಸಿ ಸೋಮವಾರ ಧರಣಿ ನಡೆಸಿದರು.
ಪಟ್ಟಣದ ಇತರ ವಾರ್ಡ್‌ಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಬಿಡುವ ಅಧಿಕಾರಿಗಳು ನಮ್ಮ ವಾರ್ಡ್‌ಗಳನ್ನು ಮಾತ್ರ ಕಡೆಗಣಿಸಿರುವುದು ಯಾವ ನ್ಯಾಯ, ವಿಧಿಯಿಲ್ಲದೇ ನಾವು ಖಾಲಿ ಕೊಡ ಹಿಡಿದು ಧರಣಿ ಕೂರಬೇಕಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಕುಡಿಯುವ ನೀರಿನ ತೊಂದರೆಯ ಬಗ್ಗೆ ಹಲವಾರು ಬಾರಿ ಪುರಸಭೆಯ ಅಧಿಕಾರಿಗಳಿಗೆ ದೂರಿದ್ದರೂ ಕ್ರಮ ಕೈಗೊಂಡಿಲ್ಲ. ಕಸದ ರಾಶಿ, ತ್ಯಾಜ್ಯ ತೆಗೆದುಕೊಂಡು ಹೋಗಲು ಯಾರೂ ಬರುವುದಿಲ್ಲ. ಚರಂಡಿಯೆಲ್ಲಾ ತ್ಯಾಜ್ಯ ತುಂಬಿ ಹೋಗಿದೆ. ಜನರಲ್ಲಿ ಕಾಯಿಲೆ ಹೆಚ್ಚಾಗುತ್ತಿವೆ. ಬಡವರೇ ಹೆಚ್ಚಾಗಿರುವ ಈ ವಾರ್ಡ್‌ಗಳ ಶುಚಿತ್ವ ಕಡೆಗಣಿಸಲಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ರೋಗಿಗಳಿದ್ದಾರೆ. ಬಡವರು ಎಷ್ಟೆಂದು ಹಣ ಖರ್ಚು ಮಾಡಲು ಸಾಧ್ಯ. ಅಧಿಕಾರಿಗಳು ಬಂದು ನಮ್ಮ ಕಾಲೋನಿಗಳನ್ನು ಶುಚಿಗೊಳಿಸುವವರೆಗೂ ನಾವು ಈ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ ಎಂಟು ಮತ್ತು ಒಂಬತ್ತನೇ ವಾರ್ಡ್‌ಗೆ ಇತರೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ತ್ಯಾಜ್ಯ ನಿರ್ಮೂಲನೆ ಮಾಡದಿರುವುದನ್ನು ಕಣ್ಣಾರೆ ಕಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಧರಣಿ ನಿರತರಿಗೆ ಎರಡು- ಮೂರು ದಿನಗಳಲ್ಲಿ ನೈರ್ಮಲ್ಯೀಕರಣ ಮಾಡಿಸುವುದರೊಂದಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಬಿಡಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ನಂತರ ಧರಣಿ ನಿರತರು ಹಿಂದಿರುಗಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement