ಗಾಂಧಿ ವೇಷ ಧರಿಸಿ ಭಿಕ್ಷಾಟನೆ: ಆಕ್ಷೇಪ
ಕ.ಪ್ರ.ವಾರ್ತೆ ಚಿಂತಾಮಣಿ ಜೂ. 24
ಗಾಂಧಿ ವೇಷ ಧರಿಸಿ ವ್ಯಕ್ತಿಯೊಬ್ಬ ಪಟ್ಟಣದ ವಿವಿಧೆಡೆ ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ಪ್ರಜ್ಞಾವಂತ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಯನಹಳ್ಳಿ ನಿವಾಸಿ ಸಿದ್ದಪ್ಪ ಎಂಬ ವೃದ್ಧರೊಬ್ಬರು ಸರ್ಕಾರದಿಂದ ಸಿಗುವ ಸವಲತ್ತಿಗಾಗಿ ಕಚೇರಿಗಳ ಸುತ್ತಿದರೂ ಪ್ರಯೋಜನವಿಲ್ಲದೆ ಕೈಯಲ್ಲಿರುವ ಹಣವನ್ನು ಮಧ್ಯವರ್ತಿಗಳು ತಿಗಣೆಗಳಂತೆ ಹೀರಿದ ಧೋರಣೆಯಿಂದ ಬೇಸತ್ತು ಹಾಗೂ ಜೀವನೋಪಾಯಕ್ಕಾಗಿ ವಿಧಿಯಿಲ್ಲದೆ ಗಾಂಧಿ ವೇಷ ಧರಿಸಿ ಚಿಂತಾಮಣಿಯ ಪ್ರಮುಖ ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ. ಗಾಂಧೀಜಿ ರಾಷ್ಟ್ರಪಿತ ಹಾಗೂ ವಿಶ್ವದಲ್ಲಿಯೇ ಶಾಂತಿ ಸಾರಿದ ಮಹಾನ್ ವ್ಯಕ್ತಿ. ಅಂಥವರ ವೇಷ ಧರಿಸಿ ಭಿಕ್ಷೆ ಬೇಡುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸದೆ ಮೌನವಾಗಿರುವ ಬಗ್ಗೆ ಹಾಗೂ ವೃದ್ಧಾಪ್ಯ ವೇತನ ನೀಡಲು ಆಟವಾಡಿಸುವ ಅಧಿಕಾರಿಗಳ ಧೋರಣೆ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರವೂ ಕೆನರಾ ಬ್ಯಾಂಕ್ ಸೇವೆ ಲಭ್ಯ
ಮಾಲೂರು: ಈ ವಾರದಿಂದ ಎನ್ಪಿಬಿಡಬ್ಲ್ಯೂ ದಿನವಾದ ಪ್ರತಿ ಗುರುವಾರದ ಮಧ್ಯಾಹ್ನವು ಸಹ ಇತರೆ ದಿನಗಳಂತೆ ಸಾರ್ವಜನಿಕರ ವ್ಯವಹಾರಕ್ಕಾಗಿ ಬ್ಯಾಂಕ್ ಸೇವೆ ತೆರೆಯಲಾಗುತ್ತದೆ ಎಂದು ಸ್ಥಳೀಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ತ್ಯಾಗರಾಜನ್ ಹೇಳಿದ್ದಾರೆ. ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಈ ಹಿಂದೆ ಗ್ರಾಹಕರಿಗೆ ವಿವಿಧ ರೀತಿಯ ಖಾತೆ ವ್ಯವಹಾರವನ್ನು ಕ್ರಮಬದ್ಧವಾಗಿ ಇಡಲು ಬ್ಯಾಂಕ್ ಸಿಬ್ಬಂದಿಗೆ ಬಹಳ ತೊಂದರೆಯಾಗುತ್ತಿತ್ತು. ಇದಕ್ಕಾಗಿ ಕೆನರಾ ಬ್ಯಾಂಕ್ ಪ್ರತಿ ಗುರುವಾರ ಮಧ್ಯಾಹ್ನ ನಾನ್ಪಬ್ಲೀಕ್ ಬಿಸೆನೆಸ್ಸ್ ವರ್ಕಿಂಗ್ ಡೇಗೆ 1986 ಚಾಲನೆ ನೀಡಲಾಗಿದ್ದು, ಅಂದಿನ ಮಧ್ನಾಹ್ನ ನಂತರ ಗ್ರಾಹಕರ ಬ್ಯಾಂಕಿಂಕ್ ವ್ಯವಹಾರಕ್ಕೆ ಅವಕಾಶವಿರುತ್ತಿರಲಿಲ್ಲ. ಈಗ ಬ್ಯಾಂಕಿಂಕ್ ವ್ಯವಸ್ಥೆ ಬಹಳ ಆಧುನಿಕತೆ ಹೊಂದಿದ್ದು, ಸಿಬ್ಬಂದಿ ಮೇಲೆ ಒತ್ತಡ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಗುರುವಾರದ ಎನ್ಪಿಬಿಡಬ್ಲ್ಯೂ ಡೇಯನ್ನು ತೆಗೆದು ಹಾಕಿ ಅ ದಿನವನ್ನು ಸಹ ಇತರೆ ದಿನಗಳಂತೆ ಗ್ರಾಹಕರ ವ್ಯವಹಾರಿಕ ದಿನವಾಗಿಸಲಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ತ್ಯಾಗರಾಜನ್ ತಿಳಿಸಿದ್ದಾರೆ. ಗ್ರಾಹಕರು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.