ಚೈತನ್ಯಶೀಲ ಮನೋಭಾವ ಮೂಡಿಸಿದ ಆದಿ ಶ್ರೀ'
ತುರುವೇಕೆರೆ: ಜಡತ್ವನ್ನು ಹಿಮ್ಮೆಟ್ಟಿಸಿ ಚೈತನ್ಯಶೀಲ ಮನೋಭಾವವನ್ನು ಪ್ರತಿಯೊಬ್ಬರಲ್ಲೂ ಮೂಡಿಸಿದ ಮಹಾತ್ಮ ಬಾಲಗಂಗಾಧರ ಶ್ರೀಗಳು ಎಂದು ಆದಿಚುಂಚನಗಿರಿಯ ನೂತನ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ಭಕ್ತಾದಿಗಳು ನೀಡಿದ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ಇಡೀ ಸಮಾಜವೇ ಜಡತ್ವದಲ್ಲಿ ಮುಳುಗಿತ್ತು. ದೈವ ಸಂಭೂತರಾಗಿದ್ದ ಬಾಲಗಂಗಾಧರ ಶ್ರೀಗಳ ದೂರದೃಷ್ಟಿಯಿಂದಾಗಿ ಅಂಕುಡೊಂಕಾಗಿದ್ದ ಸಮಾಜವನ್ನು ಸರಿದಾರಿಗೆ ತಂದರು. ಚೈತನ್ಯದ ಸ್ಫೂರ್ತಿಯಾದರು. ಬಾಲಗಂಗಾಧರನಾಥ ಸ್ವಾಮಿಗಳು ಎಂದೂ ನಮ್ಮಿಂದ ಮರೆಯಾಗಿಲ್ಲ. ಅವರ ಆತ್ಮಕ್ಕೆ ಅಂತ್ಯ ಎಂಬುದೇ ಇಲ್ಲ. ಅವರ ಶಕ್ತಿ ಹಾಗೂ ಆತ್ಮ ಇಂದಿಗೂ ಪ್ರತಿಯೊಬ್ಬ ಭಕ್ತರಲ್ಲೂ ಮನೆ ಮಾಡಿದೆ. ಅಜ್ಞಾನದಿಂದ ನರುಳುತ್ತಿದ್ದವರಿಗೆ ದಾರಿ ದೀವಿಗೆಯಾದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯನ್ನು ಬೆಳೆಸಿ ಪೋಷಿಸಿದ ಅವರು ಎಂದೆಂದೂ ಪರಮ ಶ್ರೇಷ್ಠರು ಎಂದು ಹೇಳಿದರು. ಬಾಲಗಂಗಾಧರ ಶ್ರೀಗಳು ಸರ್ವ ಧರ್ಮಗಳನ್ನೂ ಸಮಾನತಾ ದೃಷ್ಟಿಯಿಂದ ಕಂಡರು. ಸಮಾಜದಲ್ಲಿದ್ದ ಹಲವಾರು ಸಣ್ಣ ಪುಟ್ಟ ಜನಾಂಗದ ಏಳಿಗೆಗಾಗಿ ಹಗಲಿರುಳೂ ಶ್ರಮಿಸಿದರು. ಪ್ರತಿಭಾವಂತರನ್ನು ಸಂಸ್ಥೆಗೆ ಹುಡಿಕಿ ತಂದು ಇಂದು ಮಠ ದೇಶವಿದೇಶದಲ್ಲಿ ಪ್ರಖ್ಯಾತಿ ಹೊಂದಲು ಕಾರಣೀಭೂತರಾಗಿದ್ದಾರೆ. ಇಂತಹ ಅದಮ್ಯ ಚೈತನ್ಯದ ಆಶೀರ್ವಾದ ಇರುವುದರಿಂದಲೇ ಮಠ ಅಭಿವೃಧ್ಧಿ ಪಥದತ್ತ ಸಾಗುತ್ತಿದೆ ಎಂದರು.