ಪ್ರವಾಹ ಸಂತ್ರಸ್ತರಿಗೆ ಆಹಾರ, ಬಟ್ಟೆ ಸಂಗ್ರಹ
ಕೆಜಿಎಫ್: ಉತ್ತರ ಪ್ರದೇಶದ ಪ್ರವಾಹಕ್ಕೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಸಂತ್ರಸ್ತರಿಗೆ ಆಹಾರ, ಬಟ್ಟೆ ಮತ್ತು ಇತರೆ ಸೌಲಭ್ಯಗಳನ್ನು ನೆರವನ್ನು ನೀಡುವ ಸಲುವಾಗಿ ಬಿಜೆಪಿ ವತಿಯಿಂದ ಮಾಜಿ ಶಾಸಕ ವೈ. ಸಂಪಂಗಿ ನೇತೃತ್ವದಲ್ಲಿ ಕೆಜಿಎಫ್ ನಗರದಲ್ಲಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಮಾಜಿ ಶಾಸಕ ವೈ. ಸಂಪಂಗಿ ದೇಶದ ವಿವಿಧ ರಾಜ್ಯಗಳಿಂದ ಉತ್ತರಖಾಂಡದ ಕೇದರನಾಥದಲ್ಲಿ ತೀರ್ಥಯಾತ್ರೆಗೆ ತೆರಳಿದ್ದ ಲಕ್ಷಾಂತರ ಯಾತ್ರಿಗರು ಪ್ರವಾಹದಲ್ಲಿ ಸಿಲುಕಿಕೊಂಡು ತಮ್ಮ ಕುಟುಂಬದ ಸದಸ್ಯೆರನ್ನು ಕಳೆದುಕೊಂಡು ಅಸಹಾಯಕರಾಗಿರುವ ಕರ್ನಾಟಕ ದಿಂದ ತೆರಳಿರುವ ಕನ್ನಡಿಗರಿಗೆ ತಿಂಡಿ, ಬಟ್ಟೆ ಮುಂತಾದ ಸೌಲಭ್ಯಕ್ಕೆ ಬಿಜೆಪಿ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಕೆಜಿಎಫ್ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗದ ನಾಗರಿಕರಲ್ಲಿ ದೇಣಿಗೆಯನ್ನು ನಾಲ್ಕು ದಿನಗಳವರೆಗೆ ಸಂಗ್ರಹಿಸಿ ನೆರವಾಗುವುದಾಗಿ ತಿಳಿಸಿದರು. ಈ ವೇಳೆ ಮುಖಂಡರಾದ ಸುರೇಶ್ನಾರಾಯಣ, ಬಾಟಾಗೋಪಾಲ್, ಮುನಿಸ್ವಾಮಿರೆಡ್ಡಿ, ನಗರಸಭೆ ಸದಸ್ಯರಾದ ವಿಜಯಕುಮಾರ್, ನಟರಾಜನ್, ಅಶೋಕ್ ಹಾಜರಿದ್ದರು.
ಬಿಜೆಪಿಯಿಂದ ನಿಧಿ ಸಂಗ್ರಹಣೆ
ಕೋಲಾರ: ಉತ್ತರಾಖಂಡದ ನೆರೆ ಸಂತ್ರಸ್ಥರಿಗೆ ಪರಿಹಾರ ಕಲ್ಪಿಸಲು ಬಿಜೆಪಿಯಿಂದ ನಿಧಿ ಸಂಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೀಲಿ ಕೆ.ಜಯಶಂಕರ್ ತಿಳಿಸಿದ್ದಾರೆ. ಜೂ.25ರಂದು ನಗರದ ಗಾಂಧಿವನದಿಂದ ನಿಧಿ ಸಂಗ್ರಹಣೆಗಾಗಿ ವಿವಿಧ ಕಡೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾದಯಾತ್ರೆ ಕೈಗೊಳ್ಳಲಿದ್ದು, ಸಮಸ್ತ ನಾಗರಿಕರು ಉತ್ತರಾಖಂಡದ ಪ್ರವಾಸ ಸಂತ್ರಸ್ಥರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ನೊಂದವರಿಗೆ ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ. ಹಿಂದೆಂದೂ ಕಾಣದಂಥ ಜಲಪ್ರಳಯದಿಂದಾಗಿ 60 ಧರ್ಮಶಾಲೆಗಳು ಹಾಗೂ 90 ಪ್ರವಾಸಿಗರ ಛತ್ರಗಳು ಹಠಾತ್ ಕಣ್ಮರೆಯಾಗಿದ್ದು, ಅಪಾರ ಜೀವಹಾನಿ, ನೂರಾರು ಸಾಧುಸಂತರ ದುರ್ಮರಣ, ಜನಜೀವನ ಸ್ತಬ್ಧ, ಪ್ರವಾಸಿಗರ ಸ್ಥಿತಿ ಅಯೋವುಯವಾಗಿದೆ. ಸಂಕಷ್ಟದಲ್ಲಿರುವ ದೇಶವಾಸಿಗಳ ಸಹಕಾರಕ್ಕಾಗಿ ಪರಿಹಾರ ಕಲ್ಪಿಸಲು ಬಿಜೆಪಿಯಿಂದ ನಿಧಿ ಸಂಗ್ರಹಣೆ ಕಾರ್ಯ ಹಮ್ಮಿಕೊಳ್ಳಲಾಗಿದ್ದು ಉದಾರ ದೇಣಿಗೆ ನೀಡಿ ರಾಷ್ಟ್ರೀಯ ವಿಪತ್ತಿನ ಪರಿಹಾರದಲ್ಲಿ ಸಹಭಾಗಿಗಳಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 25ರಂದು ಬೆಳಗ್ಗೆ 11 ಗಂಟೆಗೆ ಗಾಂಧಿವನದಿಂದ ಪಾದಯಾತ್ರೆ ಆರಂಭಿಸಿ ಎಂ.ಜಿ.ರಸ್ತೆ, ಎಂ.ಜಿ.ಚೌಕ, ದೊಡ್ಡಪೇಟೆ ರಸ್ತೆ, ಶಾರದ ಚಿತ್ರಮಂದಿರ ರಸ್ತೆ, ಹೊಸ ಬಸ್ ನಿಲ್ದಾಣ ವೃತ್ತದ ಮೂಲಕ ಕಾಳಮ್ಮಗುಡಿ ಬೀದಿ,ಅಮ್ಮವಾರಿಪೇಟೆ ಮುಖೇನ ನಲ್ಲಗಂಗಮ್ಮ ದೇವಾಸ್ಥಾನದವರೆಗೂ ತೆರಳಿ ಪರಿಹಾರನಿಧಿ ಸಂಗ್ರಹಣೆ ಮಾಡುವುದಾಗಿ ತಿಳಿಸಿದ್ದಾರೆ.