ಮರಳು ದಂಧೆ ತಡೆಯಲು ಒತ್ತಾಯಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ಜೂ.24
ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಮರಳು ದಂಧೆಯನ್ನು ಕೂಡಲೇ ತಡೆಗಟ್ಟಿ ಅಂತರ್ಜಲ ಕುಸಿತ ತಪ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಪ್ರಜಾ ಸೇನೆ ಜಿಲ್ಲಾ ಯುವ ಘಟಕ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ರಾಜ್ಯ ಹೈಕೋರ್ಟ್ ಮರಳು ಗಣಿಗಾರಿಕೆಯನ್ನು ನಿಷೇಧಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರೂ ಜಿಲ್ಲೆಯಲ್ಲಿ ಯಾವುದೇ ಕ್ರಮಗಳು ಕೈಗೊಂಡಿಲ್ಲ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮರಳು ಮಾಫಿಯಗಳೊಂದಿಗೆ ಕೈಜೋಡಿಸಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಕ್ರಮವಾಗಿ ಮರಳು ಸಾಗಾಣೆ ಮಾಡುವವರಿಗೆ ಮತ್ತು ಮರಳು ಗಣಿಗಾರಿಕೆ ಮಾಡುವ ಪ್ರತಿಯೊಬ್ಬರಿಗೂ 1.5 ಲಕ್ಷ ದಂಡ ವಿಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಪ್ರತಿ ಹಳ್ಳಿಗಳಲ್ಲಿ ಬ್ರಾಂದಿ, ವಿಸ್ಕಿ, ನಕಲಿ ಮದ್ಯವನ್ನು ಕಾನೂನು ಬಾಹಿರವಾಗಿ ಚಿಲ್ಲರೆ ಅಂಗಡಿಗಳಲ್ಲಿ ದಿನನಿತ್ಯ ವಸ್ತಗಳನ್ನಾಗಿ ಮಾರಾಟ ಮಾಡುತ್ತಿದ್ದು, ಇದನ್ನು ಅಧಿಕಾರಿಗಳು ಕಂಡರೂ ಸಹ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಂಗಾರಪೇಟೆ ತಾಲೂಕು ಪಂಚಾಯಿತಿ 2012-13ನೇ ಸಾಲಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಜಿಲ್ಲಾ ಆಡಳಿತಕ್ಕೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಡಿಪಿಎಸ್ನ ಕಲಾಮಂಡಳಿ ಜಿಲ್ಲಾಧ್ಯಕ್ಷ ವಿ. ದೊರೈಸ್ವಾಮಿ, ಯುವ ಅಧ್ಯಕ್ಷ ಎಸ್.ವೈ. ನಾಗರಾಜ್, ವಿ.ಲೋಕೇಶ್, ನಾಗನಾಳ ಮಂಜುನಾಥ್ ಇದ್ದರು.