ಮುಂದಿನ ವರ್ಷ ಜ.14ಕ್ಕೆ ಶಾಶ್ವತ ನೀರಾವರಿ ಯೋಜನೆಗೆ ಚಾಲನೆ
ಬಂಗಾರಪೇಟೆ: ಮುಂದಿನ ವರ್ಷ ಜನವರಿ 14ರಂದು ಶಾಶ್ವತ ನೀರಾವರಿ ಯೋಜನೆಗೆ ಸರ್ಕಾರ ಚಾಲನೆ ನೀಡುವ ಮೂಲಕ ಬಯಲುಸೀಮೆ ಜನರಿಗೆ ಹೊಸ ವರ್ಷದ ಕೊಡುಗೆಯಾಗಿ ನೀಡಲಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ನೀರಾವರಿ ಸಚಿವ ಎಂ.ಬಿ. ಪಾಟೇಲ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ನೀರಾವರಿ ನಿಗಮ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಬಯಲುಸೀಮೆ ಜಿಲ್ಲೆಗಳ ಜನಪ್ರತಿನಿಧಿಗಳ ಹಾಗೂ ಮುಖಂಡರ ಸಭೆಯಲ್ಲಿ ಡಾ. ಪರಮಶಿವಯ್ಯ ಶಿಫಾರಸಿನಂತೆ ಪಶ್ಚಿಮ ಘಟ್ಟಗಳಿಂದ ವ್ಯರ್ಥವಾಗಿ ಸಮುದ್ರ ಸೇರುವ 415 ಟಿಎಂಸಿ ನೀರನ್ನು ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 46 ತಾಲೂಕುಗಳಿಗೆ ಹರಿಸುವ ಯೋಜನೆ ಜಾರಿಗೆ ಉಂಟಾಗಿರುವ ಅಡೆತಡೆಗಳನ್ನು ನಿವಾರಿಸಿ ಅದರ ಸಾಧಕ ಭಾದಕಗಳನ್ನು ಶಮನಗೊಳಿಸಿ ಶತಾಯಗತಾಯ ಮುಂದಿನ ವರ್ಷ ಜನವರಿ 14ರಂದು ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಈ ಜಿಲ್ಲೆಗಳ ಜನರಿಗೆ ಹೊಸ ವರ್ಷದ ಕೊಡುಗೆಯಾಗಿ ನೀಡಲು ಸಭೆ ತೀರ್ಮಾನಿಸಿತು ಎಂದು ಶಾಸಕ ನಾರಾಯಣಸ್ವಾಮಿ ಹೇಳಿದ್ದಾರೆ.
ಸುಮಾರು 25ಸಾವಿರ ಕೋಟಿ ವೆಚ್ಚದಲ್ಲಿ ಈ ಯೋಜನೆ ತಲೆ ಎತ್ತಲಿದ್ದು ಈ ಯೋಜನೆ ಜಾರಿಗಾಗಿ ಹಲವು ವರ್ಷಗಳಿಂದ ಬಯಲುಸೀಮೆ ಪ್ರದೇಶದ ಜನರು ಹತ್ತಾರು ಹೋರಾಟಗಳನ್ನು ಮಾಡಿಕೊಂಡು ಬಂದು ಸರ್ಕಾರದ ಗಮನ ಸೆಳೆದಿದ್ದರು, ಈ ಯೋಜನೆ ಜಾರಿಗೆ ಬರುವುದರ ಮೂಲಕ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಇದಲ್ಲದೆ ಈಗಾಗಲೆ ಎತ್ತಿನಹೊಳೆ ಯೋಜನೆ ಸಹ ಪ್ರಾರಂಭವಾಗಿದ್ದು ಈ ಎರಡೂ ಯೋಜನೆಗಳು ಕಾರ್ಯಗತವಾದರೆ ಜಿಲ್ಲೆಗಳ ಕೆರೆಗಳು ತುಂಬಿ ಅಂತರ್ಜಲ ಮಟ್ಟ ಹೆಚ್ಚಿ ಎಲ್ಲಾ ವರ್ಗದ ಜನರ ಬವಣೆ ನೀಗಲಿದೆ, ಸದಾ ಕುಡಿಯುವ ನೀರಿಲ್ಲದೆ ಪ್ರತಿ ವರ್ಷ ನೀರಿಗಾಗಿ ಜಿಲ್ಲೆಯ ಜನರು ಪರದಾಡುತ್ತಿದ್ದರು ಇನ್ನು ಮಳೆಯಾದರಿತ ಪ್ರದೇಶವಾಗಿದ್ದ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ರಾಜ್ಯ ಸರ್ಕಾರದ ಈ ಮಹತ್ವ ನಿರ್ಧಾರದಿಂದಾಗಿ ರೈತರಲ್ಲಿ ಹೊಸ ಚಿಗುರು ಹುಟ್ಟಿಕೊಂಡಿದೆ. ಈ ಯೋಜನೆಯಲ್ಲದೆ ನಾಲ್ಕು ತಾಲೂಕುಗಳ ಜನರಿಗೆ ಅನುಕೂಲವಾಗುವ ಯರಗೋಳ್ ನೀರಾವರಿ ಯೋಜನೆಗೆ ಸಹ ಮರು ಜೀವ ಬಂದಿದ್ದು ಈಗಾಗಲೇ ಪೈಪ್ಲೈನ್ ಕಾಮಗಾರಿ ಮುಗಿದು ಅಣೆಕಟ್ಟು ನಿರ್ಮಾಣ ಮಾತ್ರ ಬಾಕಿ ಉಳಿದಿದ್ದು ಈ ಯೋಜನೆಗೂ ಇದರ ಜೊತೆಯಲ್ಲಿಯೇ ಚಾಲನೆ ಕೊಡಿಸುವುದಾಗಿ ಶಾಸಕರು ದೂರವಾಣಿ ಮುಖಾಂತರ ಕನ್ನಡಪ್ರಭಕ್ಕೆ ತಿಳಿಸಿ ಬಯಲು ಸೀಮೆ ಜನರ ರಕ್ಷಣೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸದಾ ಬದ್ಧವಾಗಿದೆ ಎಂದಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದಾಗಿ ಬಯಲುಸೀಮೆ ಜನರು ಸಂಸತಗೊಂಡಿರುವುದು ನಿಜ ಆದರೆ ಇದು ಬರೀ ಹೇಳಿಕೆಗೆ ಮಾತ್ರ ಸೀಮಿತವಾದಗೆ ನುಡಿದಂತೆ ಕಾರ್ಯಗತವಾಗಬೇಕು ಎಂಬುದು ಜನತೆ ಆಶಯವಾಗಿದೆ.