ಸಚಿವ ಮುನಿಯಪ್ಪ ನಿರ್ಲಕ್ಷ್ಯ: ಆರೋಪ
ಮಾಲೂರು: ಕಳೆದೆರಡು ದಿನಗಳಿಂದ ಆನೆಗಳ ದಾಳಿಯಿಂದ ಪ್ರಾಣ ಹಾಗೂ ಬೆಳೆ ಹಾನಿಯಾಗುತ್ತಿದ್ದರೂ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಮಂತ್ರಿ ಕೆ.ಎಚ್. ಮುನಿಯಪ್ಪ ಹಾಗೂ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ಸಾಂತ್ವನ ಹೇಳದಿರುವುದನ್ನು ಸ್ಥಳೀಯ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ವೆಂಕಟೇಶ್ ತೀವ್ರವಾಗಿ ಖಂಡಿಸಿದ್ದಾರೆ. ಆರು ಬಾರಿ ಕ್ಷೇತ್ರದ ಸಂಸದರಾಗಿರುವ ಕೆ.ಎಚ್. ಮುನಿಯಪ್ಪ ಅವರು ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಾರೆ. ಕ್ಷೇತ್ರದ ಜನತೆ ಪ್ರಾಣಾಪಾಯವಿರುವಾಗಲೂ ಕ್ಷೇತ್ರಕ್ಕೆ ಬಾರದೆ ಕೇವಲ ಸಮಾರಂಭಗಳಿಗೆ ಮಾತ್ರ ಬರುತ್ತಿರುವುದು ಖಂಡನೀಯ ಎಂದರು. ಇನ್ನಾದರೂ ಉಸ್ತುವಾರಿ ಸಚಿವ ಹಾಗೂ ಕೇಂದ್ರ ಮಂತ್ರಿಗಳು ತಕ್ಷಣ ಪ್ರಾಣ ಕಳೆದುಕೊಂಡ ತಾಲೂಕಿನ ಮೂವರಿಗೆ ಹಾಗೂ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೇ ಆನೆ ದಾಳಿವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಅರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು.