ಸಮ್ಮೇಳನದಲ್ಲಿ ತಾಲೂಕು ಕವಿಗಳ ಕವನಗಳ ಕುರಿತು ವ್ಯಂಗ್ಯವಾಡಿದ ಅಧ್ಯಕ್ಷರು
ಚಿಂತಾಮಣಿ: ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ಸ.ರಘುನಾಥ್ ಮಾಡಿದ ಅಧ್ಯಕ್ಷೀಯ ಭಾಷಣದ ಬಗ್ಗೆ ತಾಲೂಕು ಕನ್ನಡ ಸಾಹಿತ್ಯ ವೇದಿಕೆ ತೀವ್ರ ಅಕ್ರೋಶ ವ್ಯಕ್ತಪಡಿಸಿದೆ.
ರಘುನಾಥ್ ಅವರು ತಮ್ಮ ಭಾಷಣದಲ್ಲಿ ಭಾಗವಹಿಸಿದ್ದ ಕವಿಗಳ ಕವನಗಳ ಕುರಿತು ವ್ಯಂಗ್ಯವಾಗಿ ಹಾಗೂ ಲಘುವಾಗಿ ಮಾತನಾಡುವ ಮೂಲಕ ಭಾಗವಹಿಸಿದ್ದ ಕವಿಗಳಿಗೆ ಸಮ್ಮೇಳನದಲ್ಲಿ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಕಾಗತಿ ವಿ.ವೆಂಕಟರತ್ನಂ ಆರೋಪಿಸಿದ್ದಾರೆ.
ರನ್ನ, ಪಂಪ ಅವರ ಕಾವ್ಯಗಳನ್ನು ಓದಿ ಆ ರೀತಿಯ ಕಾವ್ಯಗಳನ್ನು ರಚಿಸಬೇಕು. ಇಲ್ಲವಾದರೆ ಕವನ ಬರೆಯುವುದನ್ನೇ ನಿಲ್ಲಿಸಬೇಕೆಂದು ಹೇಳುವ ಮೂಲಕ ಪ್ರಬುದ್ಧ ಸಾಹಿತಿಯೆನಿಸಿರುವ ರಘುನಾಥ್ ಅಪ್ರಬುದ್ಧತೆ ತೋರಿದ್ದಾರೆ. ಇಂದಿನ ಕಾಲದಲ್ಲಿ ಹಳೆಗನ್ನಡದಲ್ಲಿ ಕಾವ್ಯ ರಚಿಸಿದರೆ ಅದನ್ನು ಓದುವವರು ಎಷ್ಟು ಮಂದಿ ಇದ್ದಾರೆ? ಹಿರಿಯ ಕವಿಯಾದವರು ಇತರರ ರಚನೆಗಳ ಬಗ್ಗೆ ಸಾರ್ವಜನಿಕವಾಗಿ ಅವಹೇಳನ ಮಾಡುವುದನ್ನು ಬಿಟ್ಟು ಅವರ ಸಾಹಿತ್ಯದಲ್ಲಿನ ಲೋಪದೋಷಗಳನ್ನು ಗುರುತಿಸಿ ಸಲಹೆ ನೀಡಬೇಕೇ ಹೊರತು ಈ ರೀತಿ ಅಸಂಬದ್ಧ ಹೇಳಿಕೆ ನೀಡಬಾರದೆಂದು ಸಲಹೆ ನೀಡಿದ್ದಾರೆ.
ಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳ ಅನೇಕ ಕವನಗಳು ರಾಜ್ಯ ಮಟ್ಟದ ಹಲವಾರು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಕವನಸಂಕಲನ ಹಾಗೂ ಸ್ಮರಣ ಸಂಚಿಕೆಗಳಲ್ಲೂ ಪ್ರಕಟಗೊಂಡಿದ್ದು ಕೆಲವು ಕವನಗಳು ಬಹುಮಾನಗಳನ್ನು ಕೂಡ ಪಡೆದಿವೆ. ಹೀಗಿರುವಾಗ ರಘುನಾಥ್‌ರವರು ಇವರ ಕವನಗಳ ಕುರಿತು ಇವುಗಳು ಕವನಗಳೇ ಅಲ್ಲ ಎಂಬ ರೀತಿಯಲ್ಲಿ ಪರೋಕ್ಷವಾಗಿ ಮಾತನಾಡುವ ಮೂಲಕ ಕವಿಗಳ ಮನಸ್ಸಿಗೆ ಘಾಸಿಯುಂಟು ಮಾಡಿರುವುದು ವಿಷಾದದ ಸಂಗತಿ ಎಂದಿದ್ದಾರೆ.
ಈ ಹಿಂದೆಯೂ ಕೋಲಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಘುನಾಥ್‌ರವರು ಚಿಂತಾಮಣಿ ತಾಲೂಕಿನಲ್ಲಿ ನಡೆಯುತ್ತಿರುವ ಕವಿಗೋಷ್ಠಿಗಳು ಭಜನಾ ಮಂಡಳಿಗಳಿದ್ದಂತೆ ಎಂಬುದಾಗಿ ಟೀಕಿಸಿರುವ ಸಂಗತಿಯೂ ನನ್ನ ಗಮನಕ್ಕೆ ಬಂದಿದೆ. ಇತರರ ಕವನ ಹಾಗೂ ಕವಿಗೋಷ್ಠಿಗಳ ಬಗ್ಗೆ ಒಂದಲ್ಲಾ ಒಂದು ರೀತಿಯಾಗಿ ಅನುಚಿತವಾಗಿ ಮಾತನಾಡುವುದನ್ನು ಬಿಟ್ಟು ತಮ್ಮ ಘನತೆ ಗೌರವಗಳನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ತಾಲೂಕಿನ ಕನ್ನಡಪರ ಸಂಘಟನೆಗಳು ಹಾಗೂ ಇನ್ನಿತರೆ ಸಂಘ ಸಂಸ್ಥೆಗಳು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಆ ಕಾರ್ಯಕ್ರಮಕ್ಕೆ ಸ.ರಘುನಾಥ್ ಅವರನ್ನು ಆಹ್ವಾನಿಸಬಾರದೆಂದು, ಅವರು ಭಾಗವಹಿಸುವ ಕವಿಗೋಷ್ಠಿ ಕಾರ್ಯಕ್ರಮಗಳನ್ನು ತಾಲೂಕಿನ ಎಲ್ಲ ಕವಿಗಳೂ ಬಹಿಷ್ಕರಿಸಬೇಕೆಂದು ಕರೆ ನೀಡಿದ್ದಾರೆ.
'ಇಂದಿನ ಮಕ್ಕಳೇ ದೇಶದ ಭವಿಷ್ಯ ರೂಪಿಸುವವರು'
ಗೌರಿಬಿದನೂರು: ದೇಶದ ನಿಜವಾದ ಭವಿಷ್ಯವನ್ನು ರೂಪಿಸಬೇಕಾದರೆ ಅದು ಇಂದಿನ ಮಕ್ಕಳಿಂದ ಮಾತ್ರ ಸಾಧ್ಯ, ಬಡತನ ಕಲಿಕೆಗೆ ಎಂದೂ ಅಡ್ಡಿ ಮಾಡುವುದಿಲ್ಲ, ಜೀವನದಲ್ಲಿ ಸಾಧನೆ ಮಾಡಲು ಒಂದು ನಿಶ್ಚಿತವಾದ ಗುರಿ ಮತ್ತು ಅದನ್ನು ಪಾಲಿಸಲು ಉತ್ತಮ ಮಾರ್ಗದರ್ಶನ ನೀಡುವಂತಹ ಒಬ್ಬ ಗುರು ಇದ್ದರೆ ಸಾಕು, ಏನನ್ನು ಬೇಕಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ವ್ಯವಸ್ಥಾಪಕ ಪಿವಿಎಸ್ ರಂಗನಾಥ್ ತಿಳಿಸಿದರು. ಅವರು ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ವರ ಮುಂದಿನ ವ್ಯಾಸಂಗಕ್ಕೆ ನೆರವಾಗುವಂತೆ ಒಂದು ಸಾವಿರ ರು. ನಗದು ಬಹುಮಾನ ನೀಡಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಟಿ.ಸಿ. ದೊಡ್ಡೇಗೌಡ, ಹಿರಿಯ ಆಡಿಟರ್ ಎಸ್.ಆರ್. ಕಟ್ಟಮನಿ, ಬ್ಯಾಂಕ್‌ನ ಫೀಲ್ಡ್ ಆಪೀಸರ್ ಸುನೀಲ್‌ಕುಮಾರ್ ಮತ್ತು ಶಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.