ಅಜೀರ್ಣದಿಂದ ವಿದ್ಯಾರ್ಥಿಗಳು ಅಸ್ವಸ್ಥ
ಕೆಜಿಎಫ್: ಕೆಜಿಎಫ್‌ನ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳು ಪ್ರಾರ್ಥನೆ ಸಮಯದಲ್ಲಿ ಶುಕ್ರವಾರ ತಲೆ ತಿರುಗಿ ಬಿದ್ದಿದ್ದು, ಜೊತೆಗೆ ಅಸ್ವಸ್ಥರಾದ ಇತರೆ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಮಾರು 260 ಮಕ್ಕಳಿದ್ದು ಬೆಳಗ್ಗೆ 8.30ಕ್ಕೆ ಉಪಹಾರವಾಗಿ ಪೊಂಗಲ್ ಅನ್ನು ಸೇವಿಸಿದ್ದರು. ನಂತರ ಕೆಲವು ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಕೆಲವು ಮಕ್ಕಳಿಗೆ ನಿಶ್ಯಕ್ತರಾಗಿ ಕೆಳಗೆ ಬಿದ್ದರು. ನಂತರ ಆ ಮಕ್ಕಳನ್ನು ಶಿಕ್ಷಕರು ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಿದ್ದು ಯಾವುದೇ ಪ್ರಾಣಪಾಯವಿಲ್ಲ ಎಂದು ತಿಳಿಸಿದ್ದು, ಅಜೀರ್ಣದಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಬೀದಿ ನಾಯಿ ದಾಳಿ: 21 ಕುರಿಗಳ ಸಾವು
ಚಿಂತಾಮಣಿ: ಹಟ್ಟಿಗೆ ಬೀದಿ ನಾಯಿಗಳು ನುಗ್ಗಿ ಕುರಿಗಳನ್ನು ಕಚ್ಚಿದ ಪರಿಣಾಮ 21 ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಹಲವು ಜೀವನ್ಮರಣದ ಹೋರಾಟ ನಡೆಸುತ್ತಿರುವ ದಾರುಣ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬೂರು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ತಾಲೂಕಿನ ಕಸಬಾ ಹೋಬಳಿ ಕುರುಬೂರು ಗ್ರಾಮದ ಬಡರೈತ ಮುನಿಯಪ್ಪ ಎಂಬವರಿಗೆ ಸೇರಿದ ಕುರಿಗಳ ಅಟ್ಟಿಗೆ ಸುಮಾರು 10ಕ್ಕೂ ಹೆಚ್ಚು ಹುಚ್ಚು ಬೀದಿನಾಯಿಗಳು ನುಗ್ಗಿ, 21 ಕುರಿಗಳಿಗೆ ಕಚ್ಚಿವೆ. ಇದರಿಂದ ಬಡರೈತ ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.