30 ಜಿಲ್ಲೆಯಲ್ಲಿ ಮಾನಸಿಕ ಪುನಃಶ್ಚೇತನ ಕೇಂದ್ರಕ್ಕೆ ಶಿಫಾರಸು
ಕ.ಪ್ರ.ವಾರ್ತೆ , ಕೋಲಾರ , ಜೂ.29
ರಾಜ್ಯದ 30 ಜಿಲ್ಲೆಗಳಲ್ಲಿ ಮಾನಸಿಕ ರೋಗಿಗಳ ಪುನಃಶ್ಚೇತನ ಕೇಂದ್ರಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗಿದ್ದು ಜುಲೈ ತಿಂಗಳಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್ನಲ್ಲಿ ಈ ಕಾರ್ಯಕ್ಕೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷ ಡಾ. ಅಶೋಕೆ ಪೈ ತಿಳಿಸಿದರು.
ಅವರು ಶನಿವಾರ ನಗರದ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂದಾಜು 50 ನಿವಾಸಿಗಳನ್ನು ಒಳಗೊಂಡಂತೆ ಉಚಿತ ದೀರ್ಘ ಮಾನಸಿಕ ಮಾನಸಿಕ ರೋಗಿಗಳ ಹಾಗೂ ತೀವ್ರತರ ಬುದ್ಧಿಮಾಂಧ್ಯ ರೋಗಿಗಳನ್ನೊಳಗೊಂಡ ಪುನಃಶ್ಚೇತನ ಕೇಂದ್ರವನ್ನು ಸ್ಥಾಪಿಸಬೇಕೆಂದು ಕಾರ್ಯಪಡೆ ಸರ್ಕಾರಕ್ಕೆ ವರದಿ ನೀಡಿದೆ ಎಂದರು.
ಮನೋಶಿಕ್ಷಣದ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಜನಜಾಗೃತಿಯನ್ನು ಮೂಡಿಸುವುದು ಮತ್ತು ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆಗಳನ್ನು ತೆಗೆದು ಸ್ವಾಸ್ಥ್ಯ ಮಾನಸಿಕ ಆರೋಗ್ಯದ ಪರಿಕಲ್ಪನೆಯನ್ನು ನೀಡುವುದು, ಮಾನಸಿಕ ಸ್ವಾಸ್ಥ್ಯ ಸಮಾಜದ ನಿರ್ಮಾಣ, ಮಧ್ಯವರ್ಜನ ಶಿಬಿರ ಹಾಗೂ ಮಾದಕ ದ್ರವ್ಯ ವ್ಯಸನಿಗಳ ಪುನಃಶ್ಚೇತನ ಕೇಂದ್ರಗಳ ಸ್ಥಾಪನೆ, ಅತ್ಮಹತ್ಯೆ ನಿರೋಧಕ ಪಡೆ ಮತ್ತು ಸಹಾಯವಾಣಿ,ಜನರಿಗೆ ಪ್ರಾಥಮಿಕ ಹಂತದಲ್ಲಿ ಮಾನಸಿಕ ಆರೋಗ್ಯವನ್ನು ಗುರುತಿಸಿ ರೋಗಿಗಳನ್ನು ಚಿಕಿತ್ಸೆಗೆ ಕಳುಹಿಸುವಂತೆ ಮಾಡುವುದು ಕಾರ್ಯಕಡೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಚಿತ್ತ ವಿಕಲತೆ, ಚಿತ್ತ ಚಾಂಚಲ್ಯ ರೋಗದ ವ್ಯತ್ಯಾಸಗಳನ್ನು ತಿಳಿಸುವುದು, ರಾಜ್ಯದಲ್ಲಿ ಇರುವಂತಹ ಮಾನಸಿಕ ಆರೋಗ್ಯ ಸೌಲಭ್ಯಗಳ ಬಗ್ಗೆ ಪರಿಶೀಲಿಸುವುದು ಮತ್ತು ಅವುಗಳನ್ನು ಮೇಲ್ದರ್ಜೆಗೇರಿಸುವುದು ಕಾರ್ಯಪಡೆಯ ಮೂಲೋದ್ದೇಶವಾಗಿದ್ದು ರಾಜ್ಯ ಸರ್ಕಾರ ಕಾರ್ಯಪಡೆಯ ಶಿಫಾರಸ್ಸುಗಳಿಗೆ ಮನ್ನಣೆ ನೀಡುವುದೆಂಬ ವಿಶ್ವಾಸವಿದೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಮಾನಸಿಕ ಆರೋಗ್ಯದ ಕಾರ್ಯಕ್ರಮದ ಮೂಲಕ ಬುದ್ಧಿಮಾಂದ್ಯ ಮಕ್ಕಳು, ಮೆದುಳುಪಾರ್ಶ್ವ ರೋಗಿಗಳು ಮತ್ತು ಬಹುಮಖ ಅಂಗವಿಕಲತೆಯುಳ್ಳ ರೋಗಿಗಳನ್ನು ನೋಡಿಕೊಳ್ಳುವುದಕ್ಕಾಗಿ ಶಾಲಾ ಶಿಕ್ಷಕರಿಗೆ ತರಬೇತಿ ನೀಡುವುದಕ್ಕೆ ಕಾರ್ಯಪಡೆ ಯೋಜನೆ ರೂಪಿಸಿದೆ. ಇದರಿಂದ ಮಕ್ಕಳಲ್ಲಿನ ಮಾನಸಿಕ ಸಮಸ್ಯೆ ಅರಿಯಲು ಅನುಕೂಲವಾಗುತ್ತದೆ ಎಂದರು.
ಮಾನಸಿಕ ಕಾಯಿಲೆ ಸಾಮಾಜಿಕ ಸಮಸ್ಯೆಯಾಗಿದ್ದು ಇವುಗಳಿಗೆ ಮೂಢನಂಬಿಕೆಗಳಿಂದ ಪರಿಹಾರ ನೀಡಲು ಸಾಧ್ಯವಿಲ್ಲ, ಬೆತ್ತಲೆ ಸೇವೆ, ಸಿಡಿ ಎತ್ತುವುದು, ಬಾನಾಮತಿ, ಕೇಗಾವತಿ ದೇವಸ್ಥಾನಗಳಲ್ಲಿ ರೋಗಿಗಳನ್ನು ಬಿಡುವುದರಿಂದ ಮಾನಸಿಕ ರೋಗ ವಾಸಿಯಾಗುವುದಿಲ್ಲ, ವೈಜ್ಞಾನಿಕವಾಗಿ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ನೀಡುವ ಮೂಲಕ ವಾಸಿಯಾದ ರೋಗಿಗಳಿಗೆ ಪುನರ್ವಸತಿ ಕಲ್ಪಿಸಿದಾಗ ಮಾತ್ರ ಮಾನಿಸಿಕ ರೋಗಿಗಳ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಡಾ. ಅಶೋಕ್ ಪೈ ತಿಳಿಸಿದರು.
ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ಅತ್ಯಚಾರ ಪ್ರಚಾರಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವುದಕ್ಕೆ ಇನ್ನು ಪ್ರಯತ್ನ ನಡೆದಿಲ್ಲ, ಅದೇ ರೀತಿ ರೈತರ ಆತ್ಯಹತ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಸಂಭವಿಸುತ್ತಿರುವ ಆತ್ಮಹತ್ಯೆ ಪ್ರಕರಣಗಳಿಗೆ ನಿಖರವಾದ ಕಾರಣ ತಿಳಿಯಲು ವೈಜ್ಞಾನಿಕ ಅವಿಷ್ಕಾರಗಳು ನಡೆದಿಲ್ಲವೆಂದರು.
ನಮ್ಮ ದೇಶದ ಜನಸಂಖ್ಯೆ 120 ಕೋಟಿಯಲ್ಲಿ 16 ಕೋಟಿಯಷ್ಟು ಮಂದಿ ಮಾನಸಿಕ ರೋಗಿಗಳಾಗಿದ್ದು ಇವರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆಯಿದೆ. ಪ್ರತಿ 1.10 ಲಕ್ಷ ಜನರಿಗೆ ಒಬ್ಬ ಮನೋವೈದ್ಯ, ಒಬ್ಬ ಮನೋವಿಜ್ಞಾನಿ, ಒಬ್ಬ ಮನೋಸಾಮಾಜಿಕ ಕಾರ್ಯಕರ್ತ, ಒಬ್ಬ ಮನೋರೋಗಿ ಶುಶ್ರೂಷಕಿಯ ಅವಶ್ಯಕತೆಯಿದೆ. ಆದರೆ, ಭಾರತದಲ್ಲಿ ಲಭ್ಯವಿರುವುದು ಕೇವಲ 4 ಸಾವಿರ ಮನೋವೈದ್ಯರು, 2 ಸಾವಿರ ಮನೋಚಿಕಿತ್ಸಕರು, 2 ಸಾವಿರ ಮಾನಸಿಕ ಸಮಾಜದ ಕಾರ್ಯಕರ್ತರು ಇರುವುದರಿಂದ ಮಾನಸಿಕ ರೋಗಿಗಳಿಗೆ ಸೂಕ್ತ ಕಾಲದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ತಿಳಿವಳಿಕೆ ನೀಡಲಾಗುತ್ತಿಲ್ಲ ಎಂದರು.
ರಾಜ್ಯದ 15 ಲಕ್ಷ ಜನಸಂಖ್ಯೆ ಇರುವ ಯಾದಗಿರಿ, ಬೀಜಾಪುರ, ಹಾವೇರಿ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಾನಸಿಕ ವೈದ್ಯರ ಕೊರತೆ ಇದೆ, ತುಮಕೂರು ಜಿಲ್ಲೆಯಲ್ಲಿ ಇದ್ದ ವೈದ್ಯರು ಖಾಲಿ ಆಗಿದ್ದಾರೆಂದು ಹೇಳಿದರು.
ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಾನಸಿಕ ರೋಗಿಗಳ ವಿವರಗಳನ್ನು ಸಂಗ್ರಹಣೆ ಮಾಡುತ್ತಿದೆ, ಜಿಲ್ಲಾ ಕೇಂದ್ರಗಳಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಸಂಬಂಧ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದು ಸರ್ಕಾರಕ್ಕೆ ಕಾಲ ಕಾಲಕ್ಕೆ ವರದಿ ಸಲ್ಲಿಸಿ ಇಡೀ ದೇಶದಲ್ಲಿ ಕರ್ನಾಟಕ ಮಾದರಿ ಮಾನಸಿಕ ಸ್ವಾಸ್ಥ್ಯ ರಾಜ್ಯವನ್ನಾಗಿ ಪರಿವರ್ತಿಸುವ ಹಂಬಲ ಹೊಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಶ್ರೀಧರಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಪ್ರಕಾಶ್ಕುಮಾರ್, ಜಿಲ್ಲಾ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ಡಾ. ಮಂಜುನಾಥ್ ಇದ್ದರು.