ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೆ ತಾಲೂಕಿನಲ್ಲಿ ಹೆಚ್ಚಾಗುತ್ತಿದ್ದರೂ ಸಂಬಂಧಪಟ್ಟ ತಾಲೂಕು ಆಡಳಿತ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ವಿಫಲಗೊಂಡಿದೆಯೆಂದು ಆರೋಪಿಸಿ ಪಟ್ಟಣದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘ ಸಮಿತಿ ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘ ಸಮಿತಿ ಜಿಲ್ಲಾ ಸಂಚಾಲಕ ವಿಜಯನರಸಿಂಹ ನೇತೃತ್ವದಲ್ಲಿ ನೂರಾರು ಜನ ದಲಿತರು ಪ್ರತಿಭಟಿಸಿದರು. ತಾಲೂಕಿನಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ತಾಲೂಕು ಆಡಳಿತ ವಿಫಲಗೊಂಡಿದೆಯೆಂದು ಆರೋಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ವಿಜಯನರಸಿಂಹ ಮಾತನಾಡುತ್ತಾ ಹಲವು ಪೊಲೀಸ್ ಅಧಿಕಾರಿಗಳು ಮೇಲ್ವರ್ಗದ ಕೈಗೊಂಬೆಗಳಾಗಿ ದಲಿತರಿಗೆ ರಕ್ಷಣೆ ನೀಡುವಲ್ಲಿ ವಿಫಲಗೊಂಡಿದ್ದಾರೆಂದು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ: ತಾಲೂಕಿನ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಪಡೆಯಲು ಬಡವರು ಪಟ್ಟಣ ಮತ್ತು ತಾಲೂಕು ಗ್ರಾಮೀಣ ಪ್ರದೇಶಗಳಲ್ಲಿ ಸೈಬರ್ ಡಾಬ ಮತ್ತು ಪಂಚಾಯ್ತಿ ಕಚೇರಿ ಮುಂಭಾಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಸರದಿ ನಿಂತು ಕಾಯಬೇಕಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು, ಕೂಲಿಕಾರ್ಮಿಕರು ಸೇರಿದಂತೆ ನೂರಾರು ಜನರು ಸಂಕಷ್ಟಕ್ಕೀಡಾಗಿದ್ದರು ಸಹ ಅಧಿಕಾರಿಗಳ ನಿರ್ಲಕ್ಷದಿಂದ ಸಮರ್ಪಕ ವಿತರಣೆ ಆಗುತ್ತಿಲ್ಲವೆಂದು ಆರೋಪಿಸಿದ್ದಾರೆ.
ಪಡಿತರ ಕಾರ್ಡ್ಗಳನ್ನು ಮನೆ ಬಾಗಿಲಿಗೆ ವಿತರಿಸಬೇಕು. ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ಸರ್ವಾಧಿಕಾರಿ ದೋರಣೆಯಿಂದ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕೂಡಲೇ ನಿಲ್ಲಿಸಬೇಕು. ಎಲ್ಲಾ ದಲಿತ ಕಾಲೋನಿಗಳಿಗೂ ನೀರು ಕಲ್ಪಿಸಿಕೊಡಬೇಕು. ಸೇರಿದಂತೆ 16 ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಾಲೂಕು ದಂಡಾಧಿಕಾರಿ ಎಂ.ಎನ್.ಮಂಜುನಾಥ್ರವರಿಗೆ ಮನವಿ ಪತ್ರವನ್ನು ನೀಡಿದರು. ಕರ್ನಾಟಕ ದಲಿತ ಸಂಘ ಸಮಿತಿ ಪದಾಧಿಕಾರಿಗಳಾದ ಚಲಪತಿ, ರಘು, ವೆಂಕಟರವಣಪ್ಪ, ಸುಮನ್, ದಯಾನಂದ, ಮುನಿಸ್ವಾಮಿ, ಸೇರಿದಂತೆ ಹಲವರು ಭಾಗವಹಿಸಿದ್ದರು.