ನೀರಿಗಾಗಿ ಜಾನುವಾರುಗಳ ಪರದಾಟ
ಕ.ಪ್ರ.ವಾರ್ತೆ , ಕೋಲಾರ , ಜೂ. 29
ಮಳೆಯಿಲ್ಲದಿರುವುದರಿಂದ ಕುಡಿಯುವ ನೀರಿನ ಅಭಾವ ಕೇವಲ ಜನರಿಗೆ ಮಾತ್ರವೇ ಅಲ್ಲ ಇದರ ಪರಿಣಾಮ ಪಶು-ಪಕ್ಷಿಗಳಿಗೂ ತಟ್ಟಿದೆ.
ಜನ ಬೇಕಾದರೆ ದುಡ್‌ಡು ಕೊಟ್ಟು ಕುಡಿಯುವ ನೀರನ್ನು ಖರೀದಿ ಮಾಡಬಹುದು. ಆದರೆ ಮೂಖ ಪ್ರಾಣಿಗಳ ಪಾಡೇನು. ಜಿಲ್ಲೆಯಲ್ಲಿದ್ದ ಕುಂಟೆಗಳು, ಗೋಕುಂಟೆಗಳು, ಕೃಷಿ ಹೊಂಡಗಳು ಮಾಯವಾಗಿವೆ, ನೀರು ಸಂಗ್ರಹದ ಆಸರೆಯಾಗಿದ್ದ ತೊಟ್ಟಿಗಳು ಕಸ ತುಂಬುವ ಡಸ್ಟ್‌ಬಿನ್‌ಗಳಾಗಿವೆ.
ಇದರ ಪರಿಣಾಮ ಕುಡಿಯುವ ನೀರು ಸಿಗದೆ ಜಾನುವಾರುಗಳು ಬಾಯಾರಿ ಬಳಲಿ ಅಲೆದಾಡುವಂತಾಗಿದೆ. ಕಾಂಕ್ರಿಟ್ ಕಾಡಾಗಿರುವ ನಗರ ಪ್ರದೇಶದಲ್ಲಿ ಜಾನುವಾರುಗಳ ಪರಿಸ್ಥಿತಿ ಕೇಳುವವರು ಇಲ್ಲದಂತಾಗಿದೆ.
ಕುಡಿಯುವ ನೀರಿನ ಸೌಕರ್ಯವಿಲ್ಲದೆ ಗುಟುಕು ನೀರಿಗಾಗಿ ಅಲೆದಾಡುತ್ತಾ ರಸ್ತೆ ಬದಿಯ ಗುಂಡಿಗಳಲ್ಲಿ, ಹಳ್ಳ ಕೊಳ್ಳಗಳಲ್ಲಿ ಸಂಗ್ರಹವಾಗುವ ಮಳೆಯ ನೀರು ಇಲ್ಲವೆ ಸೊರಿಕೆಯಾದ ಕೊಳವೆ ನೀರನ್ನು ಕುಡಿದು ದಣಿವಾರಿಸಿಕೊಳ್ಳಬೇಕಾಗಿದೆ.
ಜಿಲ್ಲೆಯಲ್ಲಿ ಅನೇಕ ಕಡೆ ಮುಚ್ಚಿ ಹೋಗಿದ್ದ ಕಲ್ಯಾಣಿಗಳ ಪೈಕಿ ಶೇ. 50 ರಷ್ಟನ್ನು ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಅವರು ಪುನಃಶ್ಚೇತನಗೊಳಿಸಿದ್ದಾರೆ. ಅದರಂತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಕುಡಿಯುವ ನೀರಿಗಾಗಿ ತೊಟ್ಟಿಗಳನ್ನು ನಿರ್ಮಿಸಿದಲ್ಲಿ ಜಾನುವಾರುಗಳಿಗೆ ಅನುಕೂಲವಾಗುತ್ತದೆ.