ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೆರಳಾಗಿದ್ದ ಮರಕ್ಕೆ ಕೊಡಲಿ: ಜನಾಕ್ರೋಶ

Vishwanath S
Updated On : 30 Jun 2013, 12:34 pm

ಕ.ಪ್ರ.ವಾರ್ತೆ ,  ಕೋಲಾರ ,  ಜೂ. 29
ನಗರದಲ್ಲಿ ಸಾಲು ಮರಗಳು ಇರುವುದೇ ಅಪರೂಪ. ಅಂತಹದರಲ್ಲಿ ಅರಣ್ಯ ಇಲಾಖೆಯ ಗುತ್ತಿದಾರನೊಬ್ಬ ಜನರಿಗೆ ನೆರಳಾಗಿದ್ದ ಗುಲ್‌ಮೋಹರ್ ಮರವೊಂದನ್ನು ಕಡಿದು ಜನತೆಯ ಆಕ್ರೋಶಕ್ಕೆ ಗುರಿಯಾಗಿರುವ ಘಟನೆ ಶನಿವಾರ ನಗರದ ಪಿಸಿ ಬಡಾವಣೆಯ 6ನೇ ಕ್ರಾಸ್‌ನಲ್ಲಿ ನಡೆದಿದೆ.
ಈ ಬಡಾವಣೆಯ ನಿವಾಸಿ ಚಂದ್ರಶೇಖರ್ ಎಂಬುವರು ತಮ್ಮ ಮನೆಯ ಮುಂದೆ ಬೆಳೆದಿರುವ ಗುಲ್‌ಮೋಹರ್ ಮರ ಶಿಥಿಲಗೊಂಡು ಅಪಾಯದ ಅಂಚಿನಲ್ಲಿದ್ದ ಕಾರಣ ಮರವನ್ನು ತೆರವು ಮಾಡುವಂತೆ ಸಾಮಾಜಿಕ ಅರಣ್ಯ ಇಲಾಖೆಗೆ ಕೆಲವು ದಿನಗಳ ಹಿಂದೆ ಅರ್ಜಿ ನೀಡಿದ್ದರು.
ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ ಮರ ಕಡಿಯಲು ಬಂದ ಗುತ್ತಿಗೆದಾರರ ಕಡೆಯ ಸಿಬ್ಬಂದಿ ಶಿಥಲಗೊಂಡಿರುವ ಮರ ಯಾವುದು ಎಂದು ಅಲ್ಲಿನ ಜನರನ್ನು ಇಲ್ಲವೇ ಅರ್ಜಿದಾರರನ್ನು ವಿಚಾರಿಸದೆ ಸುಸ್ಥಿತಿಯಲ್ಲಿದ್ದ ಮತ್ತೊಂದು ಗುಲ್‌ಮೋಹರ್ ಮರವನ್ನು ಕ್ಷಣಾರ್ಧದಲ್ಲಿ ವಿದ್ಯುತ್ ಚಾಲಿತ ಗರಗಸದಿಂದ ಕತ್ತರಿಸಿ ನೆಲಕ್ಕೆ ಉರುಳಿಸಿದರು. ಇದನ್ನು ಗಮನಿಸಿದ ಬಡಾವಣೆಯ ಜನರು ಸಿಬ್ಬಂದಿ ಕೈಯಿಂದ ಮರ ಕಡಿಯುವ ಯಂತ್ರವನ್ನು ಕಸಿದುಕೊಂಡು ತೀವ್ರವಾಗಿ ಪ್ರತಿಭಟಿಸಿದರು.
ಮಕ್ಕಳು ನೆರಳಲ್ಲಿ ಆಡುವುದಕ್ಕೆ ಅನುಕೂಲವಾಗಿದ್ದ ಮರವನ್ನು ಕಡಿರುವುದಕ್ಕೆ ಮಹಿಳೆಯರು ಗುತ್ತಿಗೆದಾರ ಮತ್ತು ಸಿಬ್ಬಂದಿಗೆ ಹಿಡಿ ಶಾಪ ಹಾಕಿದರು. ಗಂಡಸರು ಸಿಬ್ಬಂದಿಯ ಜನತೆ ಮಾತಿನ ಚಕಮಕಿ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿ ಮಲ್ಲಯ್ಯನವರು ಜನತೆಯ ಆಕ್ರೋಶ ಅರ್ಥಮಾಡಿಕೊಂಡು ಮರ ಕಡಿದಿರುವುದಕ್ಕೆ ಕ್ಷಮೆಯಾಚಿಸಿ ಜನರ ಆಕ್ರೋಶ ತಣ್ಣಗಾಗಿಸಿದರು.
ಶಿಥಿಲಗೊಂಡಿರುವ ಮರ ಕಡಿಯುವಂತೆ ಸೂಚಿಸಲಾಗಿತ್ತು, ಗುತ್ತಿಗಾರರ ಕಡೆಯವರು ಮಾಹಿತಿ ಸರಿಯಾಗಿ ಪಡೆಯದೆ ಬೇರೆ ಮರವನ್ನು ಕತ್ತರಿಸಿದ್ದಾರೆಂದು ಸ್ಪಷ್ಟನೆ ನೀಡಿದ ಮಲ್ಲಯ್ಯನವರು, ತಪ್ಪಿಸ್ಥರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಗರದಲ್ಲಿ ಸಾಲು ಮರಗಳು ಇರುವುದೇ ಕಡಿಮೆ, ಪಿಸಿ ಬಡಾವಣೆಯ 6ನೇ ಕ್ರಾಸ್‌ನಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಕೆಲವು ವರ್ಷಗಳ ಹಿಂದೆ ಮರಗಳನ್ನು ಬೆಳೆಸಲಾಗಿತ್ತು. ಇದು ಜನತೆಗೆ ನೆರಳಾಗಿತ್ತು, ಮಕ್ಕಳು ಉತ್ತಮವಾದ ಗಾಳಿ, ಪರಿಸರದಲ್ಲಿ ಆಟವಾಡಲು ಅನುಕೂಲವಾಗಿತ್ತು. ಈ ರಸ್ತೆಯಲ್ಲಿ ಯಾವುದೇ ಸಂಚಾರ ದಟ್ಟಣೆ ಇಲ್ಲ, ರಸ್ತೆ ಅಗಲೀಕರಣದ ಅವಶ್ಯಕತೆಯೂ ಇಲ್ಲ, ಆದರೂ ಅರಣ್ಯ ಇಲಾಖೆಯವರು ಸುಸ್ಥಿತಿಯಲ್ಲಿದ್ದ ಮರವನ್ನು ಕತ್ತರಿಸಿರುವುದು ಬೇಜಾವ್ದಾರಿತನ ತೋರುತ್ತದೆ ಎಂದು ಅಲ್ಲಿನ ನಿವಾಸಿ ಕೆ. ನರಸಿಂಹಮೂರ್ತಿ, ಸತ್ಯನಾರಾಯಣರಾವ್, ಸಂತೋಷ್, ಮುನಿವೆಂಕಟೇಗೌಡ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement