ಮಲೇರಿಯಾ ವಿರೋಧಿ ಜಾಗೃತಿ ಜಾಥಾಗೆ ಚಾಲನೆ
ಚಿಕ್ಕಬಳ್ಳಾಪುರ: ಮಲೇರಿಯಾ ವಿರೋಧಿ ಮಾಸಾಚರಣೆ, ಡೆಂಘಿ ಜ್ವರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ ಚಾಲನೆ ನೀಡಿದರು.
ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಿಂದ ಆರಂಭವಾದ
ಜಾಥಾದಲ್ಲಿ, ಡೆಂಘಿ ಕುರಿತು ಅರಿವು ಮೂಡಿಸುವ ಮಾಹಿತಿಯ ಭಿತ್ತಿಫಲಕಗಳೊಂದಿಗೆ ಶಾಲಾ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಸೊಳ್ಳೆ ನಿಯಂತ್ರಣ ನಿಮ್ಮಿಂದ, ನಿಮಗಾಗಿ ಎಂಬ ಘೋಷಣೆಯನ್ನು ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಕಾಯಿಲೆಗಳು ಹರಡುವುದನ್ನು ಮುನ್ನೆಚ್ಚರಿಕೆ ಕ್ರಮಗಳಿಂದ ತಡೆಯಬಹುದು. ಕಾಯಿಲೆಗಳು ಬಂದ ಮೇಲೆ ಕಷ್ಟಪಡುವ ಬದಲು, ಕಾಯಿಲೆಗಳು ಬಾರದಂತೆ ಎಚ್ಚರವಹಿಸಿ ಆರೋಗ್ಯಕರ ಜೀವನವನ್ನು ನಡೆಸಬೇಕೆಂದು ಸಲಹೆ ನೀಡಿದರು. ಡೆಂಗ್ಯು, ಮಲೇರಿಯಾ ಕಾಯಿಲೆಗಳು ಸೊಳ್ಳೆಗಳಿಂದ ಹರಡುತ್ತವೆ. ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲು ಸ್ವಚ್ಛತೆಯನ್ನು ಕಾಪಾಡದಿರುವುದಾಗಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಮೊದಲು ಆದ್ಯತೆ ನೀಡಬೇಕೆಂದರು. ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಬಾಬುರೆಡ್ಡಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ಹರೀಶ್, ವೈದ್ಯ ದಿವಾಕರ್, ತಾ.ಪಂ. ಇಓ ಶಶಿಕುಮಾರ್ ಇದ್ದರು.