ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಸಕ ವರ್ತೂರು ಪ್ರಕಾಶ್‌ಗೆ ಸನ್ಮಾನ

Vishwanath S
Updated On : 30 Jun 2013, 12:36 pm

ಕೋಲಾರ: ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಆರ್. ವರ್ತೂರು ಪ್ರಕಾಶ್ ಅವರನ್ನು ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಶನಿವಾರ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ನಗರಸಭೆ ಮಾಜಿ ಸದಸ್ಯ ಸುಬ್ರಮಣಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ನಾಗರಾಜ್, ಕಾರ್ಯದರ್ಶಿ ವಿ.ಮುರಳಿ ಮೋಹನ್, ಖಜಾಂಚಿ ವಿ. ವರದರಾಜಯ್ಯ, ಸಂಘಟನಾ  ಕಾರ್ಯದರ್ಶಿ ಕೆ. ವೆಂಕಟೇಶ್, ರಾಜ್ಯ ಸಂಘದ ಪ್ರತಿನಿಧಿ ಆರ್. ನಾರಾಯಣಸ್ವಾಮಿ, ಅಬ್ದುಲ್ ಮೆನನ್, ಬಿ.ಎಲ್. ವೀರರಾಂ ಮತ್ತಿತರರು ಇದ್ದರು.

ನಾಳೆ ಸುವರ್ಣ ತಿಂಗಳೋತ್ಸವ
ಕೋಲಾರ: ಬಂಗಾರಪೇಟೆ ಕನ್ನಡ ಸಂಘದ ವತಿಯಿಂದ ಪ್ರತಿ ತಿಂಗಳ 1 ನೇ ತಾರೀಖಿನಂದು ಕುವೆಂಪು ವೃತ್ತದಲ್ಲಿ ಭುವನೇಶ್ವರಿ ತಾಯಿ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಈಗಾಗಲೇ 49 ನೇ ತಿಂಗಳ ಕಾರ್ಯಕ್ರಮ ಪೂರೈಸಿದ್ದು 50 ನೇ ತಿಂಗಳ ಸುವರ್ಣ ತಿಂಗಳೋತ್ಸವ ಕಾರ್ಯಕ್ರಮವನ್ನು ಜುಲೈ 1 ರಂದು ಸಂಜೆ 7 ಗಂಟೆಗೆ ಪಟ್ಟಾಭಿಷೇಕೊದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ. ಜು.1 ಸೋಮವಾರ ಕಲಾವಿದ ಗೋನಾಸ್ವಾಮಿ ತಂಡದವರಿಂದ ಜಾನಪದ ಸಂಗೀತ ರಸಸಂಜೆ ವಾದ್ಯಗೋಷ್ಟಿ.ನೃತ್ಯ, ಜು.2 ಮಂಗಳವಾರ ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಳಿಯವರಿಂದ ಲಂಚಾವತಾರ ಮತ್ತು ಮಕ್ಮಲಲ್ಟೋಪಿ ನಾಟಕದ ಆಯ್ದ ದೃಶ್ಯಗಳನ್ನೊಳಗೊಂಡ ವಿಶೇಷ ನಾಟಕ ಪ್ರದರ್ಶನ ಜು.3 ರ ಬುಧವಾರ ಚಲನಚಿತ್ರ, ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದ ನೃತ್ಯ ಕಲಾವಿದರಿಂದ ನೃತ್ಯ ರಸಸಂಜೆ ಹಾಗೂ ಮಾತನಾಡುವ ಗೊಂಬೆ ಮತ್ತು ವಿವಿಧ ವಿನೋದಾವಳಿಯ ಜೊತೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ತಿಳಿಸಿದ್ದಾರೆ.

ಹದಗೆಟ್ಟ ಕೆಜಿಎಫ್ ರಸ್ತೆ, ಬೆಸ್ಕಾಂನಿಂದ ಮತ್ತಷ್ಟು ಹಾಳು
ಕೆಜಿಎಫ್: ನಗರದ ಪ್ರಮುಖ ರಸ್ತೆಗಳು ತೀರಾ ಹದೆಗೆಟ್ಟಿದ್ದು ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದು ವಾಹನ ಚಾಲಕರು ಪರದಾಡುವಂತಾಗಿದೆ. ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಗಮನ ಹರಿಸುತ್ತಿಲ್ಲ ಎಂಬುದು ಕ್ಷೇತ್ರದ ಸಾರ್ವಜನಿಕರ ಆರೋಪವಾಗಿದೆ. ನಗರದ ಅಶೋಕ್‌ನಗರ, ಗಾತಾರಸ್ತೆ, ಉರಿಗಾಂ ರೇಲ್ವೆ ರಸ್ತೆ, ಉರಿಗಾಂಪೇಟೆ, ಬೆಮೆಲ್‌ನಗರ ರಸ್ತೆಗಳು ಹಳ್ಳ ಗುಂಡಿಗಳಿಂದ ಹದೆಗೆಟ್ಟಿದ್ದು ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು ಆಟೋ, ಬಸ್ಸು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಸ್ಕಾಂ ಇಲಾಖೆ ವತಿಯಿಂದ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಇಲಾಖೆಯ ಗುತ್ತಿಗೆ ಕಾರ್ಮಿಕರು ಕಂಬಗಳನ್ನು ಟ್ರಾಲಿಗಳಿಲ್ಲದ ಟ್ರ್ಯಾಕ್ಟರ್‌ಗಳಿಗೆ ಕಟ್ಟಿಕೊಂಡು ರಸ್ತೆಯಲ್ಲೇ ಎಳೆದುಕೊಂಡು ಹೋಗುವುದರಿಂದ ರಸ್ತೆಗಳು ಇನ್ನು ಹಾಳಾಗುವುದು ಖಚಿತ. ಆದರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಬೆಸ್ಕಾಂ ಇಲಾಖೆಯ ಅಧಿಕಾರಿಗಳಾಗಲಿ ತಡೆಯಲು ಮುಂದಾಗಿಲ್ಲ. ಸಂಬಂಧಪಟ್ಟ ಇಲಾಖೆಯ ಅದಿಕಾರಿಗಳು  ಇತ್ತ ಗಮನ ಹರಿಸಿ ವಿದ್ಯುತ್ ಕಂಬಗಳನ್ನು ಟ್ರಾಲಿನಲ್ಲಿ ಸಾಗಿಸಲು ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ಕೆಜಿಎಫ್ ಕ್ಷೇತ್ರದ ವಾಹನ ಚಾಲಕರ ಮತ್ತು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇಂದು ಅಂಬೇಡ್ಕರ್ ಪ್ರತಿಮೆ ಅನಾವರಣ
ಕೋಲಾರ: ತಾಲೂಕಿನ ಗದ್ದೆ ಕಣ್ಣೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಆನಾವರಣ ಸಮಾರಂಭವನ್ನು ಜೂ.30ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಶಾಸಕ ಆರ್. ವರ್ತೂರು ಪ್ರಕಾಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ವೀರಯ್ಯ ಅಧ್ಯಕ್ಷತೆ ವಹಿಸುವರು. ಕೊತ್ತೂರು ಮಂಜುನಾಥ್ ಪುತ್ಥಳಿ ಅನಾವರಣ ಗೊಳಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಎಸ್. ಮಂಜುನಾಥಗೌಡ, ವೈ. ರಾಮಕ್ಕ, ಕೆ.ಎಂ. ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ: ವೃದ್ಧ ಸಾವು
ಚಿಂತಾಮಣಿ: ಅಪರಿಚಿತ ವಾಹನವೊಂದು ವೃದ್ಧ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿರುವ ದಾರುಣ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಳಗವಾರ ಗೇಟ್ ಬಳಿ ಶನಿವಾರ ಬೆಳಗ್ಗೆ ನಡೆದಿದೆ.  ಮೃತರ ಶವವನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಪೊಲೀಸ್ ಮೆಟ್ಟಿಲೇರಿದ ಉಪನ್ಯಾಸಕರು
ಚಿಂತಾಮಣಿ: ಖಾಸಗಿ ಕಾಲೇಜಿನ ಉಪನ್ಯಾಸಕರಿಬ್ಬರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿ ಪೊಲೀಸ್ ಠಾಣೆಯಲ್ಲಿ ನ್ಯಾಯ ಪಂಚಾಯ್ತಿ ನಡೆದಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಣಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಟ್ಟಣದಲ್ಲಿನ ಖಾಸಗಿ ಕಾಲೇಜು ಒಂದರಲ್ಲಿ ಇಬ್ಬರು ಉಪನ್ಯಾಸಕರು ಕಾಲೇಜಿನ ಪ್ರಾಂಶುಪಾಲರ ಹುದ್ದೆಗಾಗಿ ಪೈಪೋಟಿ ನಡೆಸಿ ಮಾತಿನ ಚಕಮಕಿ ನಡೆದು ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಬಳಿಕ ಪೊಲೀಸ್ ಠಾಣೆಯಲ್ಲಿ ಪರ-ವಿರೋಧ ದೂರು ಸಹ ನೀಡಿ, 2 ಕಡೆಯ ಮುಖಂಡರ ಮಧ್ಯೆ ಮಾತುಕತೆ ಮುಖಾಂತರ ಸಮಸ್ಯೆಯನ್ನು ರಾಜಿ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement