ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ...
ಬಂಗಾರಪೇಟೆ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಎಂಬ ಗಾದೆಯಂತೆ ರಸ್ತೆ ಮಧ್ಯೆಯಿರುವ ಮರಕ್ಕೆ ಶಾಲಾ ವಾಹನ ಡಿಕ್ಕಿ ಹೊಡೆದ ಬಾಲಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಮರವೇ ಕಾರಣವೆಂದು ರಾತ್ರೋ ರಾತ್ರಿ ಆ ಮರವನ್ನು ಕಡಿದು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬುಧವಾರ ಪಟ್ಟಣದ ಹೊರವಲಯದಲ್ಲಿರುವ ಜೈನ್ ಇಂಟರ್ನ್ಯಾಷನಲ್ ಶಾಲೆಯ ಬಸ್ ಕೋಲಾರ ತಾಲೂಕು ನರಸಾಪುರ ಗ್ರಾಮದಿಂದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದಾಗ ಚಿಕ್ಕಅಂಕಂಡಹಳ್ಳಿ ಗೇಟಟ್ಬಳಿ ಶಾಲಾ ಬಸ್ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಒಬ್ಬ ಬಾಲಕನ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಮರವೇ ಕಾರಣವೆಂದು ರಾತ್ರೋರಾತ್ರಿ ಮರವನ್ನು ನೆಲಕ್ಕೆ ಬೀಳಿಸಲಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ಒಂದಾಗಿ ಮರದಿಂದಲೆ ಬಾಲಕ ಮೃತಪಟ್ಟಿದ್ದಾನೆಂದು ಮರ ಕಡಿಯಲಾಗಿದೆ.ಕೋಲಾರ-ಕೆಜಿಎಫ್ ರಸ್ತೆ ಬದಿಯಲ್ಲಿ ನೂರಾರು ಮರಗಳಿವೆ. ಪ್ರತಿದಿನ ಈ ಮಾರ್ಗದಲ್ಲಿ ಅಪಘಾತಗಳು ನಡೆಯುತ್ತಲೇ ಇವೆ ಆಗೆಲ್ಲ ಮರಗಳನ್ನು ಕಡಿಯದ ಇವರು ಈಗೇಕೆ ಕಡಿದರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.ಮರಯಿದ್ದರಿಂದ ಒಬ್ಬ ಬಾಲಕ ಸತ್ತಿದ್ದಾನೆ. ಅದು ಇಲ್ಲದಿದ್ದರೆ ಬಸ್ ಉರುಳಿ ಮತ್ತೆಷ್ಟು ಮಂದಿಗೆ ಪ್ರಾಣ ಹಾನಿಯಾಗುತ್ತಿತ್ತೋ ದೇವರೇ ಬಲ್ಲ. ಎಲ್ಲಾ ಅಪಘಾತಗಳಿಗೂ ರಸ್ತೆಗಳ ಪಕ್ಕದಲ್ಲಿರುವ ಮರಗಳೇ ಕಾರಣ ಎಂದರೆ ರಸ್ತೆಗಳ ಪಕ್ಕದಲ್ಲಿ ಯಾವುದೇ ಮರಗಳು ಇರಲು ಸಾಧ್ಯವಿಲ್ಲ. ಎಲ್ಲಾ ಮರಗಳನ್ನು ಕಡಿಯಬೇಕಾದಿತು.ಕೋಲಾರ-ಕೆಜಿಎಫ್ ನಡುವಿನ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದರೂ ರಸ್ತೆ ತುಂಬಾ ಕಿರಿದಾಗಿರುವುದರಿಂದ ಆಗಾಗ ಇಂತಹ ಅಪಘಾತಗಳು ಮರುಕಳಿಸುತ್ತಿದೆ. ಇದಕ್ಕೆ ಪರಿಹಾರ ರಸ್ತೆ ವಿಸ್ತರಿಸಬೇಕೆ ವಿನಃ ರಸ್ತೆ ಪಕ್ಕದಲ್ಲಿರುವ ಮರಗಳನ್ನು ನಾಶ ಮಾಡುವುದಲ್ಲ.ಇನ್ನಾದರು ಅಧಿಕಾರಿಗಳು ಇಂತಹ ಅವೈಜ್ಞಾನಿಕ ಕಲ್ಪನೆಯನ್ನು ನಂಬದೆ ವಾಸ್ತವ ಸ್ಥಿತಿ ಅರಿತು ಕಾರ್ಯನಿರ್ವಹಿಸಲಿ ಎಂದು ಪಟ್ಟಣದ ಬುದ್ಧಿಜೀವಿಗಳು ಸಲಹೆ ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.