ಬಿರುಸುಗೊಂಡ ಚುನಾವಣಾ ಕಾವು
ಚಿಕ್ಕಬಳ್ಳಾಪುರ: ಸದ್ಯ ಚುನಾವಣಾ ಪ್ರಚಾರ ಸಮಯದ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮುಖಂಡರು ತಮ್ಮ ಬೆಂಬಲಿಗರನ್ನು ಜತೆಗಿರಿಸಿ ಗಲ್ಲಿ ಗಲ್ಲಿಯಲ್ಲೂ ಸುತ್ತಾಡುತ್ತಿದ್ದಾರೆ.
'ನಿಮ್ಮ ಮತವನ್ನು ನಮ್ಮ ಅಭ್ಯರ್ಥಿಗೆ ಹಾಕಿ, ಈ ಬಾರಿ ಅಭಿವೃದ್ಧಿ ನೀವೇ ನೋಡಿ' ಎಂಬಿತ್ಯಾದಿ ಸ್ಲೋಗನ್ ಹೇಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ತಮ್ಮ ಕಡೆಗೆ ಸೆಳೆಯುವ ಕಸರತ್ತು ಮಾಡುತ್ತಿದ್ದಾರೆ.
ಮಾ.7ರಂದು ಸ್ಥಳೀಯ ಆಡಳಿತ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ವಿವಿಧ ವಾರ್ಡುಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ 145 ವಾರ್ಡುಗಳಲ್ಲಿ ಒಟ್ಟು 720 ಮಂದಿ ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ. ರಾಜ್ಯ ರಾಜಕಾರಣದ ಮೇಲೆ ಪ್ರಮುಖವಾಗಿ ಪ್ರಭಾವ ಬೀರುವ ವಿಧಾನಸಭಾ ಚುನಾವಣೆ ಸಮರವು ಸಹ ಸಮೀಪಿಸುತ್ತಿರುವುದರಿಂದ ಈಗಿನಿಂದಲೇ ನಾನಾ ಪಕ್ಷಗಳು ಚುನಾವಣೆಯನ್ನು ಪೈಪೋಟಿಯಾಗಿ ತೆಗೆದುಕೊಂಡು ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯ ಮೂಲಕ ಪಕ್ಷದ ಬಲವರ್ಧನೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದ್ದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಬೇರೆ ಬೇರೆ ಪಕ್ಷಗಳು ಬಿರುಸಿನ ಚಟುವಟಿಕೆಗಳಲ್ಲಿ ಬ್ಯುಸಿಯಾಗಿವೆ.
ಸಂಸದರ ಸಂಚಾರ: ಶುಕ್ರವಾರ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಮೋಹನ್ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಗರದ ಸುಬ್ಬರಾಯನಪೇಟೆ, ಸೊಪ್ಪಿನಬೀದಿ, ನಂದಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪ್ರಚಾರಕ್ಕಾಗಿ ಹೊರಟರು.
ಪಕ್ಷದ ಮುಖಂಡರಾದ ನಾರಾಯಣಪ್ಪ, ಡಾ. ಮಂಜುನಾಥ್, ಎ.ವಿ. ಭೈರೇಗೌಡ, ಪ್ರೇಮಲೀಲಾ ವೆಂಕಟೇಶ್, ಲಕ್ಷ್ಮೀನಾರಾಯಣ ಗುಪ್ತ, ಕಣಿತಹಳ್ಳಿ ನಾರಾಯಣಸ್ವಾಮಿ ಮುಂತಾದವರು ಪಕ್ಷದ ಬಾವುಟಗಳನ್ನು ಕೈಯಲ್ಲಿ ಹಿಡಿದು ಜೈಕಾರದ ಘೋಷಣೆಗಳೊಂದಿಗೆ ಹಿಂದೆ ಹೆಜ್ಜೆ ಹಾಕಿದರು. ಬಿಜೆಪಿಯ ಸದಸ್ಯರನ್ನು ಬೆಂಬಲಿಸಿ, ಬದಲಾವಣೆಯನ್ನು ತನ್ನಿ ಎಂದು ಮತದಾರರನ್ನು ಕೋರಿದರು. ಮನೆ ಬಾಗಿಲಿಗೆ ಬಂದಂತಹ ನಾಯಕರನ್ನು ಸ್ವಾಗತಿಸಿ, ನಗು ಮೊಗದಲ್ಲಿ ನಮ್ಮ ಮತ ನಿಮ್ಮ ಪಕ್ಷಕ್ಕೆ ಎಂಬ ಭರವಸೆ ನೀಡಿ ಕಳುಹಿಸುವಂತಹ ಸಹಜ ಜಾಣ್ಮೆ ಮತದಾರರೂ ಪ್ರದರ್ಶಿಸಿದರು.
ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಒಳ್ಳೆಯ ಕಾರ್ಯಕ್ರಮಗಳು, ಜನಪರ ಯೋಜನೆಗಳ ಮೂಲಕ ಒಳ್ಳೆಯ ಆಡಳಿತ ನೀಡಿದೆ. ಮತ್ತಷ್ಟು ಅಭಿವೃದ್ಧಿಯನ್ನು ಸಾಧಿಸುವಂತಾಗಲು ಬಿಜೆಪಿಗೆ ಬೆಂಬಲವನ್ನು ನೀಡಬೇಕೆನ್ನುವುದನ್ನು ಮತದಾರರಲ್ಲಿ ಮನದಟ್ಟು ಮಾಡಲು ಸಂಸದ ಮೋಹನ್ ಪ್ರಯತ್ನಿಸಿದರು. ಆದರೆ, ಸಮಯದ ಅಭಾವ ಕಾರಣದಿಂದಲೇನೋ ವಾರ್ಡುಗಳಲ್ಲಿ ಪ್ರಚಾರದ ಸಂಚಾರವು ಅತಿ ವೇಗವಾಗಿಯೇ ಇತ್ತು. ಜನರು ಯಾರು ಬಂದಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮುಖಂಡರು ಜಾಗ ಖಾಲಿ ಮಾಡುತ್ತಿದ್ದರು. ಇದರಿಂದ ಬಂದವರು ಯಾರು ಎಂಬ ಪ್ರಶ್ನೆಗಳನ್ನು ಪರಸ್ಪರ ನೆರೆಹೊರೆ ಮನೆಯವರು ಕೇಳಿಕೊಳ್ಳುತ್ತಿದ್ದರು.
ಶಾಸಕರ ಪ್ರಚಾರ: ಚಿಕ್ಕಬಳ್ಳಾಪುರ ಶಾಸಕ ಕೆ.ಪಿ.ಬಚ್ಚೇಗೌಡ ಸಹ ತಮ್ಮ ಬೆಂಬಲಿಗರೊಂದಿಗೆ ನಗರದಲ್ಲಿ ಮತ ಪ್ರಚಾರ ಕಾರ್ಯ ಕೈಗೊಂಡರು. ವಾಪಸಂದ್ರ, ರೇಷ್ಮೆ ಮಾರುಕಟ್ಟೆ ಸುತ್ತಮುತ್ತಲು ಪ್ರಚಾರ ಮೆರವಣಿಗೆ ಹೊರಟು ಜನರ ಮುಂದೆ ತಮ್ಮ ಜೆಡಿಎಸ್ ಗುಣಗಾನ ಮಾಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಿಕ್ಕಬಳ್ಳಾಪುರವನ್ನು ಜಿಲ್ಲೆಯನ್ನಾಗಿಸಿದರು. ನಗರದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಅವರು ವಹಿಸಿದ ಪಾತ್ರ ಮಹತ್ತರವಾದುದು ಎಂದು ತಿಳಿಸಿದರು. ಹಿಂದೆ ನಗರಸಭಾ ಸದಸ್ಯರು ಯಾವ ರೀತಿ ಕೆಟ್ಟ ಆಡಳಿತ ನಡೆಸಿದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಧ್ಯಕ್ಷರನ್ನು ಅಧಿಕಾರದಲ್ಲಿ ಕೂರಿಸಲು, ಇಳಿಸಲು ಅವರು ಸಾಕಷ್ಟು ಶ್ರಮಿಸಿದರೇ ಹೊರತು ನಗರದ ಅಭಿವೃದ್ಧಿ ಕಾರ್ಯ ಸಮರ್ಪಕವಾಗಿ ಕೈಗೊಳ್ಳಲಿಲ್ಲ. ಈ ಬಾರಿಯಾದರೂ ಉತ್ತಮರನ್ನು ಆಯ್ಕೆ ಮಾಡಿ ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭ ಕೆಎಂಎಫ್ ನಿರ್ದೇಶಕ ಕೆ.ವಿ.ನಾಗರಾಜ್, ಮುಖಂಡರಾದ ಕೆ.ಆರ್. ರೆಡ್ಡಿ, ಶ್ರೀನಿವಾಸ್, ನಾರಾಯಣಸ್ವಾಮಿ, ಜೆಡಿಎಸ್ ಅಭ್ಯರ್ಥಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಮತ್ತೊಂದೆಡೆ ಕಾಂಗ್ರೆಸ್ ಮುಖಂಡರು ಸಹ ಪ್ರಚಾರ ಕಾರ್ಯ ಬಿರುಸುಗೊಳಿಸಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ, ಮುಖಂಡರಾದ ಕೆ.ವಿ. ನವೀನ್ ಕಿರಣ್ ಸೇರಿದಂತೆ ಮತ್ತಿತರೆ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಹಾಗೆಯೇ ಪಕ್ಷೇತರರು ಸಹ ಪ್ರಚಾರದಲ್ಲಿ ಹಿಂದೆಯೇನೂ ಬಿದ್ದಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.