ಶಾಸಕ ಸುಧಾಕರ್ ಪಾಳೆಗಾರಿಕೆಗೆ ಕಡಿವಾಣ: ಕೆ.ಎಚ್. ಮುನಿಯಪ್ಪ
ಚಿಂತಾಮಣಿ: ಶಾಸಕ ಎಂ.ಸಿ.ಸುಧಾಕರ್ ಪಾಳೆಗಾರಿಕೆಗೆ ಶೀಘ್ರ ಕಡಿವಾಣ ಹಾಕಲಾಗುತ್ತದೆ ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಿದರು.
ನಗರದ ಫಿಲ್ಟರ್‌ರೆಡ್ ಬಳಿ ಇರುವ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ವಾಣಿಕೃಷ್ಣಾರೆಡ್ಡಿ ಅವರ ಸ್ವಗೃಹದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಶಾಸಕ ಎಂ.ಸಿ.ಸುಧಾಕರ್ ಕಾಂಗ್ರೆಸ್‌ನಿಂದ ಗೆದ್ದು ವಿಪಕ್ಷದ ಜತೆ ಕೈಜೋಡಿಸಿ ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಳೇಗಾರತನಕ್ಕೆ ಶೀಘ್ರವೇ ಕಡಿವಾಣ ಹಾಕಲಾಗುವುದು ಎಂದರು. ನಂತರ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ, ಮಾಜಿ ಸಚಿವ ವಿ.ಮುನಿಯಪ್ಪ ಮಾತನಾಡಿ, ಹೊಸ ವಾತಾವರಣ ನಿರ್ಮಾಣ ಮಾಡಲು ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಾಣಿಕೃಷ್ಣಾರೆಡ್ಡಿ ನಾಯಕತ್ವ ಬಲಪಡಿಸಿ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಲು ಮನವಿ ಮಾಡಿದರು. ಸ್ಥಳೀಯ ಶಾಸಕ ಸುಧಾಕರ್ ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನೆಂದು ಕಾಂಗ್ರೆಸ್ ಬಿ.ಫಾರಂಗಳನ್ನು 2 ಚುನಾವಣೆಗಳಲ್ಲಿಯೂ ತಿರಸ್ಕರಿಸಿರುವ ಬಗ್ಗೆ ವಿ.ಮುನಿಯಪ್ಪ ಶಾಸಕರ ವಿರುದ್ಧ ಕಿಡಿಕಾರಿದರು. ಸುಧಾಕರ್ ಅಂತಹವರನ್ನು ಬೇರು ಸಹಿತ ಪಕ್ಷದಲ್ಲಿ ತೆಗೆದು ಹಾಕುವ ಬಗ್ಗೆ ಹೈಕಮಾಂಡ್ ನಿರ್ಧರಿಸಿದೆ ಎಂದೂ ಅವರು ಹೇಳಿದರು.
ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ನಿಸಾರ್ ಅಹಮದ್, ಅಲ್ಪಸಂಖ್ಯಾತರ ಮತಗಳಿಂದ ಗೆದ್ದ ಸ್ಥಳೀಯ ಶಾಸಕರು ಕಳೆದ ಹಲವು ದಿನಗಳ ಹಿಂದೆ ಪೊಲೀಸ್ ಪೇದೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮುಸ್ಲಿಂ ಸಹೋದರರನ್ನು ರಾಜಕೀಯ ದುರುದ್ದೇಶದಿಂದ ಬಂಧಿಸಿದ್ದು, ಇವರ ರಾಜಕೀಯ ಕುತಂತ್ರಕ್ಕೆ ಮತದಾರರು ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು. ಇದೇ ವೇಳೆ ಮುಖಂಡರಾದ ವಾಣಿಕೃಷ್ಣಾರೆಡ್ಡಿ ಕಾರ್ಯಕರ್ತರನ್ನು ನಗರಸಭೆಯ ವಾರ್ಡ್‌ನ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಮುಖಂಡರಾದ ಆನೂರು ಸುಬ್ಬಣ್ಣ, ಗ್ಯಾಸ್ ಶ್ರೀನಿವಾಸ್, ವೀರಪ್ಪರೆಡ್ಡಿ, ಅನಕಲ್ ಶಿವಾನಂದ, ಗೋಪಾಲ್‌ಗೌಡ, ಮುದ್ದುಕೃಷ್ಣ ಯಾದವ್, ಅಲ್ತಾಫ್ ಪಾಷ, ಕೋದಂಡರಾಮ, ಕೋಡಿಪಲ್ಲಿ ಶಿವಾರೆಡ್ಡಿ, ಸುಬ್ರಮಣಿಸ್ವಾಮಿ, ನಾರಮಾಕಲಹಳ್ಳಿ ಕೃಷ್ಣ ಸೇರಿದಂತೆ ಇನ್ನೂ ಹಲವು ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.