ಸ್ಥಳೀಯ ಸಂಸ್ಥೆಗಳಿಗೆ ಉತ್ತಮರ ಆಯ್ಕೆಯಾಗಲಿ
ಕೋಲಾರ: ಇದೇ ಮಾರ್ಚ್ 7 ರಂದು ಜಿಲ್ಲಾಧ್ಯಂತ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನಪರ ಕಾಳಜಿಯುಳ್ಳ, ಪ್ರಾಮಾಣಿಕ ಹಾಗೂ ದಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಹಿರಿಯ ನಾಗರಿಕ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಂ.ಚನ್ನಪ್ಪ ಕರೆ ನೀಡಿದರು.
ನಗರದ ಮಹಾತ್ಮಗಾಂಧೀ ಉದ್ಯಾನವನದಲ್ಲಿ ಭಾನುವಾರ ಕೋಲಾರದ ಮನ್ವಂತರ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಜಾಗೃತ ಮತದಾರರ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷಕ್ಕಿಂತ ವ್ಯಕ್ತಿ ಮುಖ್ಯ, ಸಭ್ಯರು, ಜನ ಸೇವೆ ಮಾಡುವ ಮನಸ್ಸು ಉಳ್ಳವರು ಯಾವುದೇ ಪಕ್ಷದವರೇ ಆಗಿದ್ದರೂ ಸರಿ, ನಗರ-ಪಟ್ಟಣದ ಅಭಿವೃದ್ಧಿಗಾಗಿ ಉತ್ತಮವರನ್ನೇ ಆಯ್ಕೆ ಮಾಡುವುದು ಒಳ್ಳೆಯದೆಂದು ತಿಳಿಸಿದರು. ಮತದಾನದ ವ್ಯವಸ್ಥೆ ಯಾಕೆ ಜಾರಿಗೆ ಬಂದಿದೆ? ಇದರಿಂದ ಸಮಾಜಕ್ಕೆ, ದೇಶಕ್ಕೆ,ರಾಜ್ಯಕ್ಕೆ ಆಗುವ ಪ್ರಯೋಜನವೇನು ಎಂಬುದು ಅನೇಕರಿಗೆ ಇನ್ನು ಅರ್ಥವಾಗಿಲ್ಲ, ಮತದಾನ ಬೆಲೆ ಗೊತ್ತಿಲ್ಲವಾದ್ದರಿಂದ ಚುನಾವಣೆಗಳ ಸಂದರ್ಭದಲ್ಲಿ ಅನೇಕ ವ್ಯತ್ಯಾಸಗಳು ಕಾಣುವಂತಾಗಿದೆ, ಮತದಾರರು ತಮ್ಮ ಜವಾಬ್ದಾರಿಯನ್ನು ಅರಿತು ಕಡ್ಡಾಯವಾಗಿ ಮತ ಹಾಕದಿರುವುದರಿಂದ ಪ್ರಜಾಪ್ರಭುತ್ವದ ಮೌವ್ಯಗಳು ಕುಸಿಯುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮತದಾನ ಕೇವಲ ಅರ್ಥ ನಿಮಿಷದ ಕೆಲಸ. ಉತ್ತಮರನ್ನು ಆಯ್ಕೆ ಮಾಡದಿದ್ದರೆ ಮುಂದೆ ಐದು ವರ್ಷಗಳ ಕಾಲ ಕಷ್ಟ ಅನುಭವಿಸಬೇಕಾಗುತ್ತದೆ. ಮತದಾನ ಮಾಡುವಾಗ ಪಕ್ಷಕ್ಕಿಂತ ವ್ಯಕ್ತಿಯ ನಡವಳಿಕೆ, ಜನಪರ ಕಾಳಜಿಯನ್ನು ತಿಳಿದು ಅರ್ಹರನ್ನು ಆಯ್ಕೆ ಮಾಡಿದರೆ ಅಂತಹ ಜನಪ್ರತಿನಿಧಿಯಿಂದ ಸ್ಥಳೀಯ ಸಂಸ್ಥೆಗಳಿಗೆ ಒಳ್ಳೆಯ ಹೆಸರು ಬರುತ್ತದೆ, ಜನತೆಗೂ ಉಪಕಾರವಾಗುತ್ತದೆ ಎಂದು ಅಭಿಪ್ರಾಯಿಸಿದರು. ಮತದಾನಕ್ಕೆ ಹೋಗುವ ಮುನ್ನವೇ ಸೂಕ್ತ ವ್ಯಕ್ತಿಯನ್ನು ಆರಿಸಲು ಚಿಂತನೆ ಮಾಡಿ ಎಂದು ಬಿ.ಎಂ.ಚನ್ನಪ್ಪ ಸಲಹೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ, ನುಡಿ ಸುಲಭ, ನಡೆ ಕಷ್ಟ. ಒಳ್ಳೆಯದರ ಹಾಗೂ ಕೆಟ್ಟದರ ನಡುವಿನ ಸಂಘರ್ಷ ನಡೆಯುವುದರಿಂದ ಮತದಾರರು ಅತ್ಯಂತ ಎಚ್ಚರಿಕೆಯಿಂದ ತಮ್ಮ ಕರ್ತವ್ಯ ಪಾಲಿಸದಿದ್ದರೆ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಆಯ್ಕೆ ಸಮಯದಲ್ಲಿ ಒಳ್ಳೆಯ ಆಡಳಿತ ನೀಡುವವರನ್ನು ಗುರುತಿಸಬೇಕು, ಸುಳ್ಳು ಭರವಸೆ ನೀಡುವವರ ಬಗ್ಗೆ ಜಾಗೃತಿ ಮೂಡಿಸಬೇಕು. ಈ ದಿಕ್ಕಿನಲ್ಲಿ ಬಡತನ ರೇಖೆಗಿಂತ ಕೆಳಗಿರುವವರಲ್ಲಿ ಜಾಗಣತಿ ಮೂಡಿಸುವ ಅಗತ್ಯ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು. ಮನ್ವಂತರ ಪ್ರಕಾಶನ ಈ ನಿಟ್ಟಿನಿಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವೆಂದು ಬಣ್ಣಿಸಿದರು.
ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ವಕೀಲ, ಸಮಾಜ ಸೇವಕ ಕೆ.ಆರ್. ಧನರಾಜ್, ಈಗಿನ ರಾಜಕೀಯದಲ್ಲಿ ಕಲ್ಮಶ ಹೆಚ್ಚು ತುಂಬಿದೆ. ಸಂವಿಧಾನದಲ್ಲಿ ನೀಡಿರುವ ಅತ್ಯಮೂಲ್ಯ ಹಕ್ಕು ಎಂದರೆ ಅದು ಮತದಾನ. ಪ್ರತಿ ಐದು ವರ್ಷಕ್ಕೆ ಒಮ್ಮೆ ಬರುವ ಚುನಾವಣೆಯಲ್ಲಿ ಮತದಾರರು ಒಳ್ಳೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಇತರೆ ಹಕ್ಕುಗಳನ್ನು ನ್ಯಾಯಯುತವಾಗಿ ಪಡೆಯಲು ಸಾಧ್ಯವೆಂದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶ್, ಇಂದು ಚುನಾವಣೆ ಮುಕ್ತವಾಗಿ ನಡೆಯುತ್ತಿಲ್ಲ. ಸ್ವಚ್ಛ ಮನಸ್ಸಿನಿಂದ ಅರ್ಹ ಅಭ್ಯರ್ಥಿ ಆಯ್ಕೆ ಮಾಡುವ ವಾತಾವರಣ ಇಲ್ಲ. ವ್ಯವಸ್ಥೆಯಲ್ಲಿ ಬದಲಾವಣೆ ತರುವುದಾದರೆ ಅದು ನಮ್ಮಿಂದಲೇ ಶುರುವಾಗಬೇಕು. ಮತದಾರ ಜಾತಿ, ಮತ, ಪ್ರಲೋಭನೆಗೆ ಒಳಗಾಗುವುದಿಲ್ಲ ಎಂಬ ಗಟ್ಟಿ ನಿರ್ಧಾರ ತೆಗೆದುಕೊಂಡಾಗ ಮಾತ್ರ ಸುಧಾರಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಮತದಾರರಲ್ಲಿ ಅರಿವು ಮೂಡಿಸಲು ಮನ್ವಂತರ ಪ್ರಕಾಶನ ಹಮ್ಮಿಕೊಂಡಿರುವ ಅಭಿಯಾನಕ್ಕೆ ಜಿಲ್ಲೆಯ ಪ್ರತಿ ಪ್ರಜೆಯು ಮುಕ್ತ ಮನಸ್ಸಿನಿಂದ ಸಹಕಾರ ನೀಡಿದಾಗ ಮತದಾನ ವ್ಯವಸ್ಥೆಯಲ್ಲಿ ಕೊಂಚ ಮಟ್ಟಿಗಾದರೂ ಪರಿವರ್ತನೆ ತರಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್, ಮತದಾನದ ಪ್ರಮಾಣ ಜಾಸ್ತಿ ಆದರೆ ಅದು ಪ್ರಜಾಪ್ರಭುತ್ವದ ಗೆಲುವು ಎಂದು ಪರಿಗಣಿಸಬೇಕಾಗುತ್ತದೆ. ಒಂದು ವೇಳೆ ಮತದಾನ ಪ್ರಮಾಣ ಕಡಿಮೆಯಾದಲ್ಲಿ ಇದರಿಂದ ಅನುಕೂಲವಾಗುವುದು ಅಭ್ಯರ್ಥಿಗಳಿಗೆ ಮಾತ್ರ. ಹಾಗಾಗಿ ಮತದಾರರು ಕಡ್ಡಾಯವಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದಾಗ ಮಾತ್ರ ಉತ್ತಮರು ಆಯ್ಕೆ ಆಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ದೇಶದಲ್ಲಿ ಕಾನೂನು ಇಲ್ಲದೆ ಸುಧಾರಣೆ ಆಗುವುದಿಲ್ಲ, ಮತದಾರನ ಮನಪರಿವರ್ತನೆಗೆ ಕೆಲವು ಕಠಿಣ ಕಾನೂನು ಜಾರಿಗೆ ತರಬೇಕಾಗಿದೆ. ಕಡ್ಡಾಯ ಮತದಾನ ಮಾಡದಿದ್ದರೆ ಅದು ಅಪರಾಧ ಎಂಬ ಕಾನೂನು ಜಾರಿಗೆ ಬಂದಾಗ ಸುಧಾರಣೆ ಕಾಣಬಹುದು ಎಂದರು.
ಇಂದು ವಿದ್ಯಾವಂತರು, ಬುದ್ಧಿವಂತರು ಎಂದು ಹೇಳಿಕೊಳ್ಳುವವರೇ ಮತದಾನಕ್ಕೆ ಬರುವುದಿಲ್ಲ, ಚುನಾವಣೆ ದಿನ ಮನೆಯಲ್ಲಿ ಇದ್ದು ಕಾಲ ಕಳೆಯುತ್ತಾರೆ, ಇದರಿಂದ ಲಾಭ ಪಡೆಯುತ್ತಿರುವುದು ಅವಕಾಶವಾದಿ ರಾಜಕಾರಣಿಗಳು ಎಂದು ಆರೋಪಿಸಿದರು. ಮನ್ವಂತರ ಪ್ರಕಾಶನ ಅಧ್ಯಕ್ಷ ಪಾ.ಶ್ರೀ. ಅನಂತರಾಮ ಪ್ರಾಸ್ತಾವಿಕವಾಗಿ ಮಾತನಾಡಿ, ದಿಢೀರ್ ಬದಲಾವಣೆ ಸಾಧ್ಯವಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಮತದಾರರಿಗೆ ದೊಡ್ಡ ಸಂದೇಶ ನೀಡುವುದು ಅಭಿಯಾನದ ಉದ್ದೇಶವಾಗಿದೆ ಎಂದರು. ಕನ್ನಡಪರ ಸಂಘಟನೆಗಳ ಮುಖಂಡ ಕಲಾವಿದ ವಿಷ್ಣು, ಪತ್ರಕರ್ತ ಬಿ.ಸುರೇಶ್, 'ಅರಿವು' ಪತ್ರಿಕೆಯ ಪಿ.ಎಸ್.ರೆಡ್ಡಿ, ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ನರೇಂದ್ರಬಾಬು, ರೋಟರಿ ಸಂಸ್ಥೆಯ ಬಾಲಾಜಿ ರಾಘವೇಂದ್ರ ಮಾತನಾಡಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಿಸ್ಸೇಗೌಡ, ಕಸಾಪದ ಜಿಲ್ಲಾ ಸಂಚಾಲಕ ತೇ.ಸಿ. ಬದ್ರಿನಾಥ್, ಪ್ರಧಾನ ಕಾರ್ಯದರ್ಶಿ ಮಾಲೂರು ಅಶ್ವತ್ಥರೆಡ್ಡಿ, ಮಹಿಳಾ ವಿಮೋಚನಾ ಸಂಸ್ಥೆಯ ಶಾಂತಮ್ಮ, ಮನ್ವಂತರ ಪ್ರಕಾಶನದ ಪ್ರಧಾನ ಸಂಚಾಲಕ ಎಸ್.ಎನ್.ಪ್ರಕಾಶ್), ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ರೈತ ಸಂಘದ ಮತ್ತೊಂದು ಬಣದ ಜಿಲ್ಲಾ ಸಂಘಟನಾ ಸಂಚಾಲಕ ಕೆ.ಶ್ರೀನಿವಾಸಗೌಡ, ಎಬಿವಿಪಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೇಧಾರನಾಥ್, ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಉದಯಕುಮಾರ್ ಇದ್ದರು. ಸಂಘಟನಾ ಕಾರ್ಯದರ್ಶಿ ಚಿಕ್ಕ ಅಯ್ಯೂರು ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ವಿವಿಧ ಪಕ್ಷಗಳ ಅಭ್ಯರ್ಥಿಗಳು,ಕಾರ್ಯಕರ್ತರು ಆಗಮಿಸಿದ್ದರಾದರೂ ವೇದಿಕೆ ಹಂಚಿಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇರಲಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.