ಹಾಲಿ-ಮಾಜಿಗಳ ವಾಕ್ಸಮರ ತಾರಕಕ್ಕೆ
ಕೋಲಾರ: ಮಾಜಿ ಸಚಿವ ಕೆ. ಶ್ರೀನಿವಾಸಗೌಡರು ಪಾಳೇಗಾರಿಕೆ ರಾಜಕಾರಣ ಬಿಟ್ಟು ಮತದಾರರನ್ನು ಗೌರವಿಸುವುದು ಕಲಿಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್ ತಿಳಿಸಿದ್ದಾರೆ.
ನಗರದ ವಿವಿಧ ವಾರ್ಡ್ಗಳಲ್ಲಿ ವರ್ತೂರ್ ಬಣದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಮತದಾರರಿಗೆ ಕಿಂಚಿತ್ತೂ ಗೌರವ ನೀಡದ ಮಾಜಿ ಸಚಿವ ಈಗ ಅದೇ ಮತದಾರರ ಮನೆ ಬಾಗಿಲಿಗೆ ತೆರಳಿ ತಾವು ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತೇವೆ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಅಧಿಕಾರ ಕಳೆದುಕೊಂಡ ನಂತರ ಮತದಾರರ ಯೋಗಕ್ಷೇವು ವಿಚಾರಿಸದ ಶ್ರೀನಿವಾಸಗೌಡ ತಾವಾಯಿತು ತಮ್ಮ ವಿದೇಶ ಪ್ರವಾಸವಾಯಿತು ಎಂಬಂತಿದ್ದು, ಈಗ ನಗರಸಭೆ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡುವ ಮೂಲಕ ತಾವು ಸಮಯ ಸಾಧಕ ರಾಜಕಾರಣಿ ಎಂಬುದನ್ನು ನಿರುಪಿಸಿದ್ದಾರೆ ಎಂದು ಸಚಿವರು ಕಿಡಿಕಾರಿದರು.
ನಗರಸಭೆಯಲ್ಲಿ ಕೆಲವರು ತಮಗೆ ಮಾಡಿದ ದ್ರೋಹದಿಂದಾಗಿ ನಾನೇ ಸ್ವತಃ ನಿಂತು ಕೈಲಾದಷ್ಟು ಮಟ್ಟಿಗೆ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ, ನನ್ನ ಕಡೆಯವರು ಕೆಲವರು ಮೋಸ ಮಾಡಿದ್ದಾರೆಂದು ಪಲಾಯನವಾದ ತಂತ್ರ ಅನುಸರಿಸದೆ ನಡೆದ ಲೋಪದೋಷ ಒಪ್ಪಿಕೊಂಡಿದ್ದೇನೆ. ಮಾಜಿ ಸಚಿವ ಶ್ರೀನಿವಾಸಗೌಡರು ಕಾಮಲೆ ಕಣ್ಣಿಗೆ ಎಲ್ಲವೂ ಹಳದಿ ಎಂಬಂತೆ ವರ್ತಿಸುತ್ತಿದ್ದಾರೆಂದು ಟೀಸಿದ್ದಾರೆ. ಕೋಲಾರದ ಜನತೆಗೆ ನಗರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅರಿವಿದೆ. ಕುಡಿವ ನೀರಿನ ಸಮಸ್ಯೆ ನಿವಾರಣೆ ಆಗಿರುವುದರಿಂದ ನೆಮ್ಮದಿಯಿಂದ ಇದ್ದಾರೆ. ಹಾಗಾಗಿ ನಗರಸಭಾ ಚುನಾವಣೆಗೆ ಸ್ಪರ್ಧಿಸಿರುವ ನನ್ನ ಬಣದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಗಳಿಸುವುದರಲ್ಲಿ ಅನುಮಾನವಿಲ್ಲವೆಂದು ಭರವಸೆ ವ್ಯಕ್ತಪಡಿಸಿದ್ದಾರೆ. ವಾರ್ಡ್ 12, 4, 27 ರಲ್ಲಿ ಸಚಿವರು ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.
ಬೆಗ್ಲಿ ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ರಘುರಾಂ, ಸುಬ್ಬಣ್ಣ, ರಘುಕುಮಾರ್, ವೇಣುಗೋಪಾಲ್ ಇದ್ದರು.
ಸಚಿವರ ವಿರುದ್ಧ ಟೀಕೆ: ಕೋಲಾರ ವಿಧಾನ ಕ್ಷೇತ್ರದ ಮತದಾರರನ್ನು ಕೀಳಾಗಿ ಕಂಡಿರುವುದೇ ಜಿಲ್ಲಾ ಉಸ್ತುವಾರಿ ಸಚಿವ ವರ್ತೂರ್ ಪ್ರಕಾಶ್ ಅವರ ಐದು ವರ್ಷಗಳ ಸಾಧನೆಯಾಗಿದೆ ಎಂದು ಮಾಜಿ ಸಚಿವ ಕೆ. ಶ್ರೀನಿವಾಸಗೌಡ ಟೀಕಾ ಪ್ರಹಾರ ನಡೆಸಿದರು.
ನಗರದ ಗಲ್ಪೇಟೆ, ಬಂಬೂ ಬಜಾರ್, ಹಾರೋಹಳ್ಳಿ ಹಾಗೂ ಇತರ ವಾರ್ಡ್ಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಕ್ಷೇತ್ರ, ನಗರದ ಅಭಿವೃದ್ಧಿಗಾಗಿ ಗೂಂಡಾ ಸಂಸ್ಕೃತಿ ಧಿಕ್ಕರಿಸಿ ಜನಪರ ಕಾಳಜಿ ಇರುವ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಜೆಡಿಎಸ್ ಮುಖಂಡ ರಾಮರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಎಂ. ಮುನಿಯಪ್ಪ, ಕಾರ್ಯಾಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಮೂರಾಂಡಹಳ್ಳಿ ಗೋಪಾಲ್, ಬ್ಯಾಲಹಳ್ಳಿ ಶಂಕರೇಗೌಡ, ವಕೀಲ ಕಲ್ಲಂಡೂರು ಲೋಕೇಶ್, ನಾಗನಾಳ ಸೋಮಣ್ಣ, ಅನ್ವರ್ಪಾಷಾ ಇದ್ದರು.
ಹಾಲಿ-ಮಾಜಿ ಸಚಿವರು ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲ್ಲಿಸಲು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದರೆ, ಕಾಂಗ್ರೆಸ್, ಬಿಜೆಪಿ ಮುಖಂಡರು ಗದ್ದಲವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್, ಮಾಜಿ ಸಚಿವ ನಿಸಾರ್ ಅಹಮ್ಮದ್ ವಿವಿಧ ವಾರ್ಡುಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.