ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅವೇ ದೂರು... ಅದೇ ಉತ್ತರ...

Parashurama
Updated On : 19 Mar 2013, 11:32 am

ಕ.ಪ್ರ ವಾರ್ತೆ ್ಣ ಚಿಕ್ಕಬಳ್ಳಾಪುರ ್ಣ ಮಾ. 19
ಕಳೆದ ಎರಡ್ಮೂರು ಸಭೆಗಳಿಂದಲೂ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹಳೆ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ದೂರುಗಳನ್ನು ಸಲ್ಲಿಸಿದರೂ ಕೆಲಸ ಮಾಡದೇ ಸತಾಯಿಸಿದ್ದು ನಗರದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ಲೋಕಾಯುಕ್ತ ಪೊಲೀಸರಿಂದ ನಡೆದ ಅಹವಾಲು ಸ್ವೀಕಾರ ಸಭೆಯಲ್ಲೂ ಬೇಸರವನ್ನು ವ್ಯಕ್ತಪಡಿಸುತ್ತಲೇ ಸಾರ್ವಜನಿಕರು ಮತ್ತೆ ಹಳೆ ದೂರುಗಳನ್ನು ಸಲ್ಲಿಸಿದರು.
ಬಹುತೇಕ ದೂರುದಾರರು ನಾವು ನಿಮಗೆ ಹಿಂದಿನ ಸಭೆಗಳಲ್ಲಿಯೇ ಗಮನಕ್ಕೆ ತಂದಿದ್ದೇವೆ. ಆದರೆ, ನಮ್ಮ ಸಮಸ್ಯೆ ಬಗೆಹರಿದಿಲ್ಲ. ಈಗಲೂ ಮತ್ತೆ ಅರ್ಜಿಯನ್ನು ಹಿಡಿದುಕೊಂಡು ಬಂದಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಎಂದಿನಂತೆ ಲೋಕಾಯುಕ್ತ ಪೊಲೀಸರು ಅಧಿಕಾರಿಗಳಿಗೆ ಕೆಲಸ ಮಾಡಿಕೊಡಿ, ಆದಷ್ಟು ಬೇಗ ಅರ್ಜಿಯನ್ನು ಇತ್ಯರ್ಥ ಮಾಡ ಬೇಕೆಂದು ಎಚ್ಚರಿಕೆ ನೀಡಿದರು. ಇದಕ್ಕೆ ಅನುಗುಣವಾಗಿ ಅಧಿಕಾರಿಗಳು ಸಹ ನಾವೇ ಖುದ್ದು ನೋಡುತ್ತೇವೆ. ಕೆಲಸ ಮಾಡಿಕೊಡುತ್ತೇವೆ ಎಂಬ ತಮ್ಮ ಹಳೆಯ ಡೈಲಾಗ್‌ಗಳನ್ನು ಹೇಳಿ ಲೋಕಾಯುಕ್ತರನ್ನು ಮೆಚ್ಚಿಸಿದರು.
ದೂರುದಾರರ ಅಸಮಾಧಾನ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೋಕಾಯುಕ್ತ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದರೆ, ದೂರುದಾರರು ಸಹ ಪದೇ ಪದೇ ಉತ್ತರ ನೀಡುವಂತೆ ಅಧಿಕಾರಿಗಳು ಈ ಬಾರಿ ಸಹ ನೀಡಿದ ಕೆಲಸ ಮಾಡಿಕೊಡುವ ಭರವಸೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಅಹವಾಲು ಸಭೆಯಲ್ಲಿ ದೂರನ್ನು ಸಲ್ಲಿಸಿದಾಗ ಲೋಕಾಯುಕ್ತರು ಇಂತಿಷ್ಟು ಅವಧಿಯೊಳಗೆ ಕಾನೂನು ಬದ್ಧವಾಗಿ ಕೆಲಸ ಮಾಡಿಕೊಡಬೇಕೆಂಬ ಸೂಚನೆಯನ್ನು ಕೊಟ್ಟಿದ್ದು ಆಗ ಅಧಿಕಾರಿಗಳು ಸ್ಪಂದಿಸುವ ರೀತಿಯಲ್ಲಿ ತಲೆಯಾಡಿಸಿದ್ದರಾದರೂ ಎಲ್ಲಿ ನಮ್ಮ ಕೆಲಸವಾಗಿಯೇ ಇಲ್ಲ. ನೋಡಿ, ಈಗಲೂ ಸಹ ಅದೇ ಉತ್ತರವನ್ನು ನೀಡುತ್ತಿದ್ದಾರೆ. ಅಂತಹವರು ಈ ಹಿಂದಿನ ಸಭೆಗಳಲ್ಲಿ ಹೇಳಿದಂತೆ ಇಲ್ಲಿಯವರೆಗೂ ಏಕೆ ಕೆಲಸ ಮಾಡಿಲ್ಲ. ಇನ್ನೂ ಮುಂದಿನ ದಿನಗಳಲ್ಲಿ ಕೆಲಸ ಮಾಡಿಕೊಡುತ್ತಾರೆ ಎನ್ನುವುದನ್ನು ಹೇಗೆ ನಂಬುವುದು ಎಂದು ಅನುಮಾನ ವ್ಯಕ್ತಪಡಿಸಿದರು.
ಇನ್ನೂ ಕೆಲಸ ಮಾಡಿಕೊಡದ ಅಧಿಕಾರಿಗಳಿಗೆ ಪ್ರತಿ ಸಲ ಸಭೆಯಲ್ಲೂ ಏಕೆ ಗಡವುಗಳನ್ನು ಕೊಡುತ್ತ ಮುಂದಕ್ಕೆ ಹಾಕಿಕೊಂಡು ಹೋಗುವುದು. ಎಚ್ಚರಿಕೆ ನೀಡಿದ ನಂತರವು ಸಹ ಕೆಲಸ ಮಾಡಿಲ್ಲ ಅಂದಾಗ ಲೋಕಾಯುಕ್ತರು ಏಕೆ ಕ್ರಮಕೈಗೊಳ್ಳಲು ಶಿಫಾರಸ್ಸು ಮಾಡಬಾರದು.ಅದು ಬಿಟ್ಟು ಅವರು ಮಾಡಿಕೊಡಿ ಎಂದು ಹೇಳುವುದು, ಇವರು ಮಾಡಿಕೊಡುತ್ತೇವೆ ಎಂದು ಸಭೆಯಲ್ಲಿ ಹೇಳಿದರೆ ನಮ್ಮ ಸಮಸ್ಯೆ ಬಗೆಹರಿಯುತ್ತದೆಯೇ ಎಂದು ಪ್ರಶ್ನಿಸಿದರು.
ಕೋರ್ಟಿಗೂ ಕಿಮ್ಮತ್ತು ನೀಡಿಲ್ಲ: ಚಿಕ್ಕಬಳ್ಳಾಪುರ ತಾಲೂಕಿನ ಪೂಜಿನಹಳ್ಳಿಯ ನಾಗರಾಜ್ ದೂರು ಸಲ್ಲಿಸಿ,1996 ರಲ್ಲಿ ತಮಗೆ ಸೇರಿದ ಜಮೀನಿನ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದು ಅನಂತರ ಅಧಿಕಾರಿಗಳ ಕಿತಾಪತಿಯಿಂದ ವಿವಾದ ಉದ್ಭವವಾಯಿತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದಾಗ ತಮ್ಮ ಪರವಾಗಿಯೇ ತೀರ್ಪು ಬಂದಿದೆಯಾದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ.ಕಾರ್ಯದರ್ಶಿಗಳು ಇದುವರೆಗೂ ಸರ್ವೆ ಮಾಡಿಸಿ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಕೊಟ್ಟಿಲ್ಲ.ಇದನ್ನು ಕೇಳಿದರೆ, ನೀನು ನ್ಯಾಯಾಲಯಕ್ಕೆ ಹೋದರೂ, ನ್ಯಾಯಾಲಯ ತೀರ್ಮಾನ ಕೊಟ್ಟರೂ ಕೊನೆಗೆ ನಮ್ಮ ಹತ್ತಿರಕ್ಕೆ ಬರಬೇಕು. ನಾವು ಕೆಲಸ ಮಾಡಿಕೊಟ್ಟರೆ ಮಾಡಿಸಿಕೊಳ್ಳಬೇಕೆಂದು ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ನಲ್ಲಕದಿರೇನಹಳ್ಳಿಯ ನರಸಿಂಹಯ್ಯ, ನಗರವಾಸಿ ಮುನಿಸ್ವಾಮಿ, ಚನ್ನಕೇಶವರವರು ಅಧಿಕಾರಿಗಳ ಯಡವಟ್ಟು, ನಿರ್ಲಕ್ಷ್ಯದ ಬಗ್ಗೆ ಅಳಲು ತೋಡಿಕೊಂಡರು.   
ಕೊನೆಗೆ ಲೋಕಾಯುಕ್ತ ಸಬ್ ಇನ್ಸೆಪೆಕ್ಟರ್ ಕೃಷ್ಣ, ಒಂದು ಸರಿಯಾಗಿ ಕೆಲಸ ಮಾಡಿ, ಇಲ್ಲವೇ ನಾವು ಪಾಠ ಕಲಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಲೋಕಾಯುಕ್ತ ಸಬ್‌ಇನ್ಸ್‌ಪೆಕ್ಟರ್ ಮಾದೇಗೌಡ, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಶಶಿಕುಮಾರ್, ತಹಶೀಲ್ದಾರ್ ನಟೇಶ್, ನಗರ ಸಭೆ ಆಯುಕ್ತ ರುದ್ರಮುನಿ ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments