ನಾಳೆಯಿಂದ ಕ್ರೀಡಾಕೂಟ
ಶ್ರೀನಿವಾಸಪುರ: ಮಾ. 21- 22 ರಂದು ತಾಲೂಕು ಮಟ್ಟದ ಸಂಘ- ಸಂಸ್ಥೆಗಳ ಕ್ರೀಡಾಕೂಟ ಏರ್ಪಡಿಸಲಾಗಿದೆ.ನೆಹರು ಯುವ ಕೇಂದ್ರ ಕೋಲಾರ, ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ಬೆಂಗಳೂರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಾನಪದ ಹಾಗೂ ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಸಂಘ (ರಿ.) ಹೊದಲಿ, ಶ್ರೀನಿವಾಸಪುರ ತಾಲೂಕು ಇವರ ಆಶ್ರಯದಲ್ಲಿ ಶ್ರೀನಿವಾಸಪುರ ತಾಲೂಕು, ಮುತ್ತಕಪಲ್ಲಿ ಕ್ರಾಸ್ನಲ್ಲಿರುವ ಅರುಣೋದಯ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಯುವಕರಿಗೆ: ಕಬಡ್ಡಿ, ವಾಲಿಬಾಲ್, 100ಮೀ, 200 ಮೀ ಓಟ, ಹಗ್ಗ ಜಗಾಟ, ಉದ್ದ ಜಿಗಿತ ನಡೆಯಲಿದೆ.
ಯುವತಿಯರಿಗೆ: ಥ್ರೋಬಾಲ್, ಖೋಖೋ, 50 ಮೀದಿಂದ 100 ಮೀ ಓಟ, ಹಗ್ಗ ಜಗ್ಗಾಟ, ಮ್ಯೂಜಿಕಲ್ ಛೇರ್ ಕ್ರೀಡೆ ಏರ್ಪಡಿಸಲಾಗಿದೆ.
ಮಹಿಳೆ ಸಾವು
ಬಂಗಾರಪೇಟೆ: ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಮಹಿಳೆಯೊಬ್ಬಳು ಮೃತಪಟ್ಟಿರುವ ಪ್ರಕರಣ ಪಟ್ಟಣದ ರೇಲ್ವೆ ನಿಲ್ದಾಣದ ಸಮೀಪ ನಡೆದಿದೆ. ಮೃತ ಮಹಿಳೆಯನ್ನು ಕಾಂತಮ್ಮ(45) ಎಂದು ಗುರುತಿಸಲಾಗಿದೆ. ಒಂಬತ್ತುಗುಳಿ ಗ್ರಾಮದ ಈಕೆಯನ್ನು ಚಿಂತಾಮಣಿ ತಾಲೂಕು ಆಲಂಗಿರಿ ಗ್ರಾಮದ ಆದಿನಾರಾಯಣಪ್ಪ ಎಂಬವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಕಾಂತಮ್ಮ ಪತಿಗೆ ಇಬ್ಬರು ಹೆಂಡತಿಯರಿದ್ದು. ಈ ವಿಚಾರವಾಗಿ ಇಬ್ಬರಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಇಬ್ಬರಲ್ಲಿ ಮತ್ತೆ ಜಗಳವಾಗಿ ಕಾಂತಮ್ಮ ಮುನಿಸಿಕೊಂಡು ತವರು ಮನೆಯಾದ ಒಂಬತ್ತುಗುಳಿ ಗ್ರಾಮಕ್ಕೆ ಬಂದಿದ್ದು, ಮಂಗಳವಾರ ಗ್ರಾಮದ ಸಮೀಪ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾಳೆ. ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
50 ಸಾವಿರ ನಗದು ಕಳವು
ಶ್ರೀನಿವಾಸಪುರ: ಪಟ್ಟಣದ ಬ್ಯಾಂಕೊಂದರಿಂದ ಹಣವನ್ನು ಡ್ರಾ ಮಾಡಿಕೊಂಡು ಬ್ಯಾಗಿನಲ್ಲಿಟ್ಟಿಕೊಂಡು ಬರುತ್ತಿದ್ದಾಗ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಹೋಗಿ ಬ್ಯಾಗಿನಲ್ಲಿದ್ದ 50 ಸಾವಿರ ನಗದು ಹಣವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಪಟ್ಟಣದ ರಾಮಕೃಷ್ಣ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸುಮಾರು 20 ವರ್ಷಗಳಿಂದ ಜವಾನನಾಗಿ ಕಾರ್ಯ ನಿರ್ವಹಿಸುತ್ತಿರುವ ಗಂಗುಲಪ್ಪ ಎಂಬಾತನು ಪಟ್ಟಣದ ಕೆನರಾ ಬ್ಯಾಂಕಿನಲ್ಲಿಟ್ಟಿದ್ದ ಒಂದು ಲಕ್ಷ ರು.ಗಳಲ್ಲಿ 50 ಸಾವಿರ ಡ್ರಾ ಮಾಡಿಕೊಂಡು ಬ್ಯಾಗಿನಲ್ಲಿಟ್ಟುಕೊಂಡು ತನ್ನ ಮಗನೊಂದಿಗೆ ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಸಿಗಾಗಿ ಕಾಯುತ್ತಿದ್ದರು. ಆಗ ಬ್ಯಾಗನ್ನು ನೋಡಿದಾಗ ಅದರಲ್ಲಿದ್ದ 50 ಸಾವಿರ ನಗದು ಹಾಗೂ ಬ್ಯಾಂಕ್ ಪಾಸ್ಬುಕ್ ಎರಡನ್ನು ಸಹ ಕಳ್ಳರು ಎಗರಿಸಿಕೊಂಡು ಹೋಗಿದ್ದಾರೆ. ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.