ಪರೀಕ್ಷಾರ್ಥಿಗಳಲ್ಲಿ ಭಯ ಹೋಗಲಾಡಿಸಿ
ಕ.ಪ್ರ. ವಾರ್ತೆ ್ಣ ಕೋಲಾರ ್ಣ ಮಾ. 19
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಜತೆಗೆ ಗುಣಾತ್ಮಕ ಫಲಿತಾಂಶಕ್ಕಾಗಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ವಿ. ಪದ್ಮನಾಭ್ ಶಿಕ್ಷಕರಿಗೆ ಮನವಿ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ 3ನೇ ಪೂರ್ವಸಿದ್ಧತಾ ಪರೀಕ್ಷಾ ಫಲಿತಾಂಶ ವಿಶ್ಲೇಷಣಾ ಸಭೆಯಲ್ಲಿ ಮುಖ್ಯ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ, ಫಲಿತಾಂಶದಲ್ಲಿ ಜಿಲ್ಲೆಯನ್ನು 10ರೊಳಗಿನ ಸ್ಥಾನದಲ್ಲಿ ಕಾಣಲು ಮಕ್ಕಳನ್ನು ಪ್ರೇರೇಪಿಸಿ. ಉಳಿದ ದಿನಗಳಲ್ಲಿ ಅವರ ಗಮನವನ್ನು ಓದಿನ ಕಡೆ ಕೇಂದ್ರೀಕರಿಸುವಂತೆ ಮಾಡಿ ಎಂದು ಸೂಚಿಸಿದರು.
ಪ್ರಸಕ್ತ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯನ್ನು ಗುಣಾತ್ಮಕ ರೀತಿಯಲ್ಲಿ ಮೇಲ್ಮಟಕ್ಕೆ ಕೊಂಡೊಯ್ಯಲು ಈಗಾಗಲೇ ಇಲಾಖೆ ವತಿಯಿಂದ ಹಲವಾರು ರೀತಿಯ ಪ್ರಯತ್ನವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ಶಿಕ್ಷಣಾಧಿಕಾರಿ ಕೆ.ಎಂ. ಜಯರಾಮರೆಡ್ಡಿ, ಇಡೀ ಒಂದು ವರ್ಷದ ಶಿಕ್ಷಕರ ಶ್ರಮವನ್ನು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಮೂಲಕ ಒರೆಗಲ್ಲಿಗೆ ಹಚ್ಚಲಾಗುವುದು. ಈಗ ಉಳಿದಿರುವ ಕೇವಲ 15 ದಿನಗಳ ಸೀಮಿತ ಅವಧಿಯಲ್ಲಿ ಮಕ್ಕಳನ್ನು ಪರೀಕ್ಷೆಗೆ ಮತ್ತಷ್ಟು ಸಜ್ಜುಗೊಳಿಸುವ ಕಡೆ ಶಿಕ್ಷಕರು ಹೆಚ್ಚಿನ ಗಮನ ಕೊಡಬೇಕು. ಈ ಮೂಲಕ ನೈಜ ಹಾಗೂ ಆಶಾದಾಯಕ ಫಲಿತಾಂಶ ಬರುವಂತಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರೀಕ್ಷಾ ನೋಡೆಲ್ ಅಧಿಕಾರಿಯೂ ಆಗಿರುವ ಶಿಕ್ಷಣಾಧಿಕಾರಿ ನಾಗೇಂದ್ರ ಪ್ರಸಾದ್, ಜಿಲ್ಲೆಯ ಪ್ರೌಢ ಶಾಲೆಗಳ 3ನೇ ಪೂರ್ವಸಿದ್ಧತಾ ಪರೀಕ್ಷೆಯ ಫಲಿತಾಂಶದ ಬಗ್ಗೆ ಪವರ್ ಪಾಯಿಂಟ್ ಮೂಲಕ ಅಂಕಿ- ಅಂಶಗಳ ಸಮೇತ ವಿವರಿಸಿದರು.
ವಿಷಯ ಪರಿವೀಕ್ಷಕ ಸಿ.ಆರ್. ಅಶೋಕ್, ಕಾರ್ಯಕ್ರಮದಲ್ಲಿ ಡಿವೈಪಿಸಿ ಅಧಿಕಾರಿ ಸಿದ್ದಗಂಗಯ್ಯ, ವಿಷಯ ಪರೀಕ್ಷಕರಾದ ವೆಂಕಟಸ್ವಾಮಿ, ಶಿವಮಾದಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಲಿಂಗಯ್ಯ, ಕೃಷ್ಣಮೂರ್ತಿ, ಸುಬ್ರಮಣ್ಯಂ, ದೇವರಾಜ್, ಮಹ್ಮದ್ ಖಲೀಲ್, ಜಯರಾಜ್, ಇಸಿಒ ರಾಮಚಂದ್ರಾರೆಡ್ಡಿ, ಮುಖ್ಯ ಶಿಕ್ಷಕರ ಸಂಘದ ಸೋಮಣ್ಣ, ಸಿ.ಬೈರಪ್ಪ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.