'ಖಾಸಗಿ ವಿವಿ ಸ್ಥಾಪನೆ ಮಾರಕ'
ಮಾಲೂರು: ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಖಾಸಗಿ ವಿವಿ ಸ್ಥಾಪನೆಗೆ ಅವಕಾಶ ಮಾಡಿಕೊಡುತ್ತಿರುವ ರಾಜ್ಯ ಸರ್ಕಾರದ ನೀತಿ ವಿರೋಧಿಸಿ ಭಾರತೀಯ ವಿದ್ಯಾರ್ಥಿ ಫೆಡರೇಷನ್ ಗುರುವಾರ ಇಲ್ಲಿನ ಮಿನಿ ವಿಧಾನಸೌಧ ಎದುರು ಧರಣಿ ನಡೆಸಿದರು.
ಈ ಸಂದರ್ಭ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷ ಮಾರ್ಕಂಡಯ್ಯ, ಜಗತ್ತಿನ ಉತ್ತಮ ಗುಣಮಟ್ಟದ 200 ವಿವಿಗಳ ಪಟ್ಟಿಯಲ್ಲಿ ದೇಶದ ಯಾವುದೇ ವಿವಿಗಳ ಹೆಸರು ಇಲ್ಲ. ಇರುವ ವಿವಿಗಳನ್ನು ಬಲಪಡಿಸುವ ಬದಲು ರಾಜ್ಯ ಬಿಜೆಪಿ ಸರ್ಕಾರ ಚಿಕ್ಕ ಚಿಕ್ಕ ಖಾಸಗಿ ಸಂಸ್ಥೆಗಳನ್ನು ವಿವಿಗಳನ್ನಾಗಿಸಲು ಹೊರಟ್ಟಿದ್ದು, ಶಿಕ್ಷಣವನ್ನು ಮಾರಾಟದ ಸರಕನ್ನಾಗಿ ಮಾಡುತ್ತಿದೆ ಎಂದು ಅಪಾದಿಸಿದರು.
2009 ರಲ್ಲಿ ಅಜೀಂ ಪ್ರೇಮ್ಜಿ ಅವರಿಗೆ ವಿವಿ ಸ್ಥಾಪಿಸಲು ಅನುಮತಿ ನೀಡಿದ್ದ ರಾಜ್ಯ ಸರ್ಕಾರ ಇತ್ತೀಚಿಗೆ ನಡೆದ ಅಧಿವೇಶನದಲ್ಲಿ ಮತ್ತೆ 20 ಖಾಸಗಿ ಸಂಸ್ಥೆಗಳನ್ನು ವಿವಿಗಳನ್ನಾಗಿಸುವ ಮಸೂದೆ ಅನುಮೋದಿಸಿ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಿಕೊಟ್ಟಿದೆ ಎಂದು ಕಿಡಿಕಾರಿದರು.
ಸರ್ಕಾರ ಪ್ರಾರಂಭಿಸಲಾಗಿದ್ದ 24ಕ್ಕೂ ಹೆಚ್ಚು ಖಾಸಗಿ ವಿವಿಗಳು ಕಳಪೆ ಗುಣಮಟ್ಟದವು ಎಂದು ಸುಪ್ರೀಂಕೋರ್ಟ್ ಘೋಷಿಸಿದೆ. ಈ ಬಗ್ಗೆ ತಿಳಿದಿರುವ ರಾಜ್ಯ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.
ಖಾಸಗಿ ವಿವಿ ಮಸೂದೆಯಂತೆ ರಾಜ್ಯಪಾಲರು ಕುಲಾಧಿಪತಿಗಳಲ್ಲ, ಸಂಸ್ಥೆಯ ಟ್ರಸ್ಟಿಯೇ ಜೀವನ ಪರ್ಯಂತ ಕಲಾಧಿಪತಿ, ರಾಜ್ಯದವರಿಗೆ ಕೇವಲ ಶೇ.40ರಷ್ಟು ಮಾತ್ರ ಪ್ರವೇಶ. ಸಾಮಾಜಿಕ ನ್ಯಾಯ ಭದ್ರತೆಯಿಲ್ಲದ ನೇಮಕಾತಿ ಸೇರಿದಂತೆ ಹಲವಾರು ಅಪಾಯಕಾರಿ ಅಂಶಗಳಿವೆ ಎಂದು ಅಪಾದಿಸಿದರು.
ಖಾಸಗಿ ವಿವಿಗಳ ಸ್ಥಾಪನೆ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ವಿಚಾರಗಳ ತೊಟ್ಟಿಲು ಉನ್ನತ ಶಿಕ್ಷಣ ಸಂಕುಚಿತಗೊಂಡರೆ ಅಥವಾ ನಾಶವಾದರೆ ಅಂತಹ ಸಮಾಜವು ವಿಚಾರಗಳಿಗೆ ಪರಾವಲಂಬಿಯಾಗುತ್ತದೆ. ಅಂತಹ ಪರಾವಲಂಬಿ ಸಮಾಜವು ಎಂದೂ ಪೂರ್ಣ ಸ್ವಾತಂತ್ರ್ಯ ಸಮಾಜವಾಗಲಾರದು ಎಂದ ಮಾರ್ಕಂಡಯ್ಯ, ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಧಕ್ಕೆ ತರುವಂತಾಗುತ್ತದೆ. ಈ ನಿಟ್ಟಿನಲ್ಲಿ ಖಾಸಗಿ ವಿವಿಗಳ ಮಸೂದೆ ರದ್ದುಗೊಳಿಸಬೇಕೆಂದು ಮತ್ತು ಸರ್ಕಾರಿ ವಿವಿ ಗಳನ್ನು ಬಲಪಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ವಿದ್ಯಾರ್ಥಿ ಮುಖಂಡರಾದ ಗೋಪಿ, ಮುನಿರಾಜು, ದಿವ್ಯ, ಅರುಣ್,ಅನಿಲ್, ಪ್ರಭು, ಶರತ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.