ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದೇಕೆ?
ಕೋಲಾರ: ಇತ್ತೀಚೆಗೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿರುವ ವರ್ತೂರ್ ಬಣದ ಪ್ರಭಾವಿ ಮುಖಂಡ ಬ್ಯಾಂಕ್ ಮುನಿಯಪ್ಪ ಅವರ ಸಾವಿನ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರ್ ಪ್ರಕಾಶ್ ಅವರು ಅನುಮಾನ ವ್ಯಕ್ತಪಡಿಸಿರುವುದಕ್ಕೆ ಜೆಡಿಎಸ್ ಮುಖಂಡ ಕೆ.ಶ್ರೀನಿವಾಸಗೌಡರು ಟೀಕಿಸಿರುವುದನ್ನು ವರ್ತೂರ್ ಬಣದ ಬಣದ ಮುಖಂಡರು ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ವಕ್ಕಲೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಪ್ಪ, ಉಪಾಧ್ಯಕ್ಷೆ ಸಲ್ಮಾ ಮಸ್ತಾನ್, ಸದಸ್ಯರಾದ ರಾಘವೇಂದ್ರ, ಹರ್ಷವರ್ಧನ್ ಅವರುಗಳು, ತಮ್ಮ ಬಣದ ಮುಖಂಡನ ಸಾವಿನ ಬಗ್ಗೆ ಸಚಿವರು ಅನುಮಾನ ವ್ಯಕ್ತಪಡಿಸಿರುವುದಕ್ಕೆ ಸಹಿಸಲಾರದ ಶ್ರೀನಿವಾಸಗೌಡರು ಕುಂಬಳಕಾಯಿ ಕಳ್ಳ ಯಾರೆಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಬ್ಯಾಂಕ್ ಮುನಿಯಪ್ಪನವರು ಸಾವಿಗೀಡಾದ ಸ್ಥಳದಲ್ಲಿ ರಾತ್ರಿ 2 ರವರೆಗೂ ಸಚಿವರು ಹಾಗೂ ತಾವು ಖುದ್ದು ಸ್ಥಳದಲ್ಲಿದ್ದೆವು, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿಯೇ ಇದನ್ನು ಅನುಮಾನಸ್ಪದ ಸಾವೆಂದು ತನಿಖೆಗೆ ಒತ್ತಾಯಿಸಲಾಗಿದೆ ಎಂದಿದ್ದಾರೆ. ಬ್ಯಾಂಕ್ ಮುನಿಯಪ್ಪನವರ ಪಾರ್ಥಿವ ಶರೀರಕ್ಕೆ ಹೂವಿನ ಹಾರ ಹಾಕುವುದಿರಲಿ, ಕನಿಷ್ಠ ಸಂತಾಪವನ್ನು ಸೂಚಿಸುವ ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಗೋಜಿಗೆ ಮಾಜಿ ಸಚಿವರು ಹೋಗಲಿಲ್ಲ. ಈಗ ಮಾತ್ರ ಅವರ ವಿಚಾರದಲ್ಲಿ ಸಚಿವರನ್ನು ನಿಂದಿಸುವ ಅನೈತಿಕತೆ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದ್ದಾರಲ್ಲದೆ, ಮುನಿಯಪ್ಪನವರದು ಅನುಮಾನಸ್ಪದ ಸಾವು ಎಂದು ಹೇಳಲು ಸಾಕಷ್ಟು ಪುರಾವೆಗಳಿವೆ ಎಂದು ತಿಳಿಸಿದ್ದಾರೆ.
ಮುಗ್ಧ ಜನರನ್ನು ರಾಜಕಾರಣಕ್ಕೆ ಬಲಿತೆಗೆದುಕೊಳ್ಳುವುದಕ್ಕೆ ವರ್ತೂರು ಪ್ರಕಾಶಶ್ಶ್ರೀನಿವಾಸಗೌಡರಲ್ಲ. ಮಾನವೀಯ ಮೌಲ್ಯಗಳ ಆಧಾರದ ಮೇಲೆಯೇ ರಾಜಕಾರಣ ಮಾಡುವ ತಾವು ಕ್ಷೇತ್ರದಲ್ಲಿ ಅಶಾಂತಿಗೆ ಅವಕಾಶ ಕಲ್ಪಿಸುವುದಿಲ್ಲ ಎಂಬುದನ್ನು ಮಾಜಿ ಸಚಿವರು ಅರಿತುಕೊಳ್ಳುವುದಲ್ಲದೆ ಮೂರ್ಖತನದಿಂದ ಮಾತನಾಡುವುದನ್ನು ಬಿಡಬೇಕು ಎಂದು ತಾಕೀತು ಮಾಡಿದ್ದಾರೆ. ಕ್ಷೇತ್ರದಲ್ಲಿ ಕೊಲೆಗಡುಕ ರಾಜಕಾರಣ ಮಾಡಿ ಬಡ ಕುಟುಂಬಗಳನ್ನು ಅನಾಥರನ್ನಾಗಿ ಮಾಡಿರುವುದು ಯಾರೆಂಬುದು ಜನತೆಗೆ ಗೊತ್ತಿದೆ, ದಬ್ಬಾಳಿಕೆ, ರಕ್ತಸಿಕ್ತ ರಾಜಕಾರಣ ಮಾಡಿಕೊಂಡೆ ಬಂದಿರುವ ನಿಮಗೆ ಕ್ಷೇತ್ರದಲ್ಲಿ ಶಾಂತಿ ನೆಲೆಸಿರುವುದನ್ನು ಸಹಿಸಲು ಆಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸಚಿವ ವರ್ತೂರು ಪ್ರಕಾಶ್ ಅವರು ಬ್ಯಾಂಕ್ ಮುನಿಯಪ್ಪನವರ ನಿಧನದಿಂದ ಈಗಾಗಲೇ ನೊಂದಿದ್ದಾರೆ. ಮಾಜಿ ಸಚಿವರು ತಮ್ಮ ಕೀಳು ಮಾತುಗಳಿಂದ ಅವರನ್ನು ಈ ವಿಚಾರದಲ್ಲಿ ಮತ್ತಷ್ಟು ನೋಯಿಸದಂತೆ ಅವರು ಮನವಿ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.