ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ, ಕೋಲಾರ, ಮಾ.25
ಕಳೆದ ವರ್ಷ ತಾಲೂಕಿನ ಹೋಳೂರು ಹೋಬಳಿಗೆ ಸೇರಿದ ಮಾರೇನಹಳ್ಳಿಯ ದಲಿತ ವರ್ಗಕ್ಕೆ ಸೇರಿದ ಸುಬ್ರಮಣಿ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಮೃತನ ಪತ್ನಿ ಮತ್ತು ಮಕ್ಕಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಸೋಮವಾರ ಕೋಲಾರದ ಡಿವೈಎಸ್ಪಿ ಕಚೇರಿ ಮುಂದೆ ಕರ್ನಾಟಕ ಮಾದಿಗ ದಂಡೋರದಿಂದ ಧರಣಿ ನಡೆಯಿತು.
ಸುಬ್ರಮಣಿ ಕೊಲೆ ಪ್ರಕರಣದ ಆರೋಪಿಗಳಾದ ಸತ್ಯನಾರಾಯಣರೆಡ್ಡಿ, ಮಂಜುನಾಥ ರೆಡ್ಡಿ, ನಟರಾಜ್,ಶ್ರೀನಿವಾಸರೆಡ್ಡಿ ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಳೆದ ಫೆ.15 ರಂದು ತಾಲೂಕಿನ ಎಸ್.ಅಗ್ರಹಾರ ಗ್ರಾಮದಲ್ಲಿ ಯಶೋದಮ್ಮ , ಶಿವಪ್ಪ ಮತ್ತು ವೆಂಕಟೇಶ್ ಎಂಬುವರ ಮೇಲೆ ಮಟ್ನಹಳ್ಳಿ ಗ್ರಾಮದ ವೆಂಕಟೇಶಗೌಡ, ದೇವರಾಜ್ ಎಂಬುವರು ಹಲ್ಲೆ ನಡೆಸಿದ್ದು ದೂರು ನೀಡಿದ್ದರೂ ಆರೋಪಿಗಳನ್ನು ಬಂಧಿಸಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.
ಮಾ.5ರಂದು ತಾಲೂಕಿನ ವಕ್ಕಲೇರಿ ಬಳಿಯ ಮಲ್ಲೇಶ್ವರ ನಗರದ ದಲಿತರ ಮನೆಗಳಿಗೆ ನುಗ್ಗಿ ಮರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲ್ಲೆ ಗೊಳಗಾದ ದಲಿತರ ಮೇಲೆಯೇ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಮಾದಿಗ ದಂಡೋರದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್. ವೆಂಕಟಸ್ವಾಮಿ,ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ಮುನಿರಾಜು , ಮುಖಂಡರಾದ ಡಿ.ಎನ್.ಆಂಜಿನಪ್ಪ, ಸುಬ್ಬಮ್ಮ, ಯಶೋದಮ್ಮ, ಚಿನ್ನಕ್ಕ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.