ವಿದ್ಯುತ್ಗೆ ಆಗ್ರಹಿಸಿ ಬೆಸ್ಕಾಂ ಕಚೇರಿಗೆ ಮುತ್ತಿಗೆ
ಕ.ಪ್ರ.ವಾರ್ತೆ ಚಿಂತಾಮಣಿ ಮಾ.25
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೆಸ್ಕಾಂ ಹಾಗೂ ತಾಲೂಕು ಕಚೇರಿಗಳ ಮುಂಭಾಗದಲ್ಲಿ ರೈತಸಂಘ ಹಾಗೂ ಹಸಿರುಸೇನೆಯ ನೂರಾರು ಕಾರ್ಯಕರ್ತರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಪ್ರವಾಸಿ ಮಂದಿರದಿಂದ ನೂರಾರು ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಡಲು ವಿಫಲಗೊಂಡಿರುವ ಬೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು. ನಂತರ ತಾಲೂಕು ಅಧ್ಯಕ್ಷ ರಘುನಾಥರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಪಂಪ್ಸೆಟ್ಟುಗಳು ವಿದ್ಯುತ್ ಏರುಪೇರಿನಿಂದ ರೈತರು ತೀವ್ರ ಆತಂಕಕ್ಕೀಡಾಗಿದ್ದಾರೆ. ಮತ್ತೊಂದು ಕಡೆ ಕನಿಷ್ಠ ಗಂಟೆಗಳ ಕಾಲವು ವಿದ್ಯುತ್ ನೀಡದೆ ರೈತರ ಬೆಳೆಯಲ್ಲಾ ನಾಶವಾಗಿ ಸಾಲಗಾರರನ್ನಾಗಿ ಮಾಡಿದೆ ಎಂದು ಹೇಳಿದರು.
ಬೆಸ್ಕಾಂ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಸಿಂಗಲ್ ಫೇಸ್ ಕರೆಂಟ್ ಅನ್ನು ನೀಡಿ ಪಂಪ್ಸೆಟ್ ಮೋಟಾರ್, ಕೇಬಲ್ ಸುಟ್ಟು ಹೋಗಿರುವ ಬಗ್ಗೆ ತಾಲೂಕು ವ್ಯಾಪ್ತಿಯ ಹಲವಾರು ಹಳ್ಳಿಗಳಿಂದ ದೂರು ಬರುತ್ತಿದ್ದರೂ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಗೋಶಾಲೆ ತೆರೆಯಲು ಆಗ್ರಹ: ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು ಮತ್ತು ಕುಡಿಯಲು ನೀರು ಅಭಾವ ತಲೆದೋರಿದೆ. ಇದರಿಂದ ರೈತರಿಗೆ, ಜಾನುವಾರುಗಳಿಗೆ ತುಂಬಾ ತೊಂದರೆಯಾಗಿದೆ. ಜಾನುವಾರು ರಕ್ಷಿಸಲು ಪ್ರತಿ ಗ್ರಾಪಂ ವ್ಯಾಪ್ತಿಯ ಒಂದೊಂದು ಭಾಗದಲ್ಲಿ ಗೋ ಶಾಲೆಗಳನ್ನು ಸ್ಥಾಪನೆ ಮಾಡಬೇಕು ಎಂದು ರೈತಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಆಗ್ರಹಿಸಿದರು.
ಕುಡಿಯುವ ನೀರಿನಲ್ಲಿ ಫ್ಲೋರೈಡ್ ಹೆಚ್ಚಾಗಿ ವಿವಿಧ ರೋಗಗಳಿಗೆ ಜನರು ಒಳಗಾಗುತ್ತಿದ್ದಾರೆ. ಆದ್ದರಿಂದ ತಾಲೂಕು ದಂಡಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೂರಾರು ರೈತರು ಮನವಿ ಸಲ್ಲಿಸಿದರು. ಪುಡ್ ಇನ್ಸ್ಪೆಕ್ಟರ್ ವಿರುದ್ಧ ಕಿಡಿ: ತಾಲೂಕಿನಲ್ಲಿ ಫುಡ್ ಇನ್ಸ್ಪೆಕ್ಟರ್ ಶಿವಕುಮಾರ್ ರೈತರಿಗೆ ಪಡಿತರ ಚೀಟಿಗಳ ಬಗ್ಗೆ ಹಾಗೂ ರೈತರ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದೆ ಪರದಾಡಿಸುತ್ತಿದ್ದಾರೆ. ಈ ಬಗ್ಗೆ ತಾಲೂಕು ದಂಡಾಧಿಕಾರಿಗಳು ಇಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಂಡು ಬಡವರಿಗೆ, ರೈತರಿಗೆ ಪಡಿತರ ಪದಾರ್ಥಗಳನ್ನು ಸಮರ್ಪಕವಾಗಿ ವಿತರಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ರೈತಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷ ಎಸ್.ವಿ.ರಘುನಾಥರೆಡ್ಡಿ, ಕಾರ್ಯದರ್ಶಿ ನಾರಾಯಣಸ್ವಾಮಿ, ಮುಖಂಡರಾದ ಎಸ್.ವಿ.ಗಂಗುಲಪ್ಪ, ಶ್ರೀನಾಥ, ಆಂಜನೇಯರೆಡ್ಡಿ,ಚಿಕ್ಕರೆಡ್ಡೆಪ್ಪ, ರಾಜಗೋಪಾಲರೆಡ್ಡಿ, ಜಯಮ್ಮ, ಲಕ್ಷ್ಮಿದೇವಮ್ಮ, ತಾಯಮ್ಮ, ಸರಸ್ವತಮ್ಮ, ರಾಜಕುಮಾರ್, ಮಂಜುಳಾ, ಎಸ್.ವೆಂಕಟರೆಡ್ಡಿ, ಆನಂದ್, ನಾರಾಯಣಸ್ವಾಮಿ ಸೇರಿದಂತೆ ನೂರಾರು ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.