ಶಾಸಕ ಕೃಷ್ಣಯ್ಯಶೆಟ್ಟಿಗೆ ಮತ್ತೆ ಸಿಗುವುದೇ ಬಿಜೆಪಿ ಟಿಕೆಟ್?
ಕ.ಪ್ರ.ವಾರ್ತೆ, ಕೋಲಾರ, ಮಾ.25
ಮಾಲೂರಿನ ಬಿಜೆಪಿಯ ಹಾಲಿ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರಿಗೆ ಮಾ.26ರೊಳಗೆ ಟಿಕೆಟ್ ಘೋಷಣೆ ಮಾಡದಿದ್ದರೆ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಸಲುವಾಗಿ ಅವರ ಅಭಿಮಾನಿಗಳು ಮಾ.27 ರಂದು ಬುಧವಾರ ಮಾಲೂರಿನಲ್ಲಿ ವಿಶೇಷ ಸಭೆ ಕರೆದಿದ್ದಾರೆ.
ಭೂ ಹಗರಣದಲ್ಲಿ ಜೈಲು ವಾಸ ಅನುಭವಿಸಿರುವ ಹಾಗೂ ಆರೋಪದಿಂದ ಇನ್ನು ಮುಕ್ತಿ ಹೊಂದದಿರುವುದರಿಂದ ಬಿಜೆಪಿಯ ಹೈಕಮಾಂಡ್ ಟಿಕೆಟ್ ನಿರಾಕರಣೆ ಮಾಡಿದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಬೇಕೇ, ಕಾಂಗ್ರೆಸ್ ಇಲ್ಲವೇ ಜೆಡಿಎಸ್ನಿಂದ ಚುನಾವಣೆ ಎದುರಿಸಬೇಕೇ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕೃಷ್ಣಯ್ಯಶೆಟ್ಟಿ ಅವರಿಗೆ ರಾಜಕೀಯ ಶಕ್ತಿ ತುಂಬಲು ಅವರ ಅಭಿಮಾನಿಗಳು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯಿಂದ ಟಿಕೆಟ್ ಸಿಗಲಿದೆ ಎಂದು ಕೃಷ್ಣಯ್ಯಶೆಟ್ಟಿ ನಂಬಿದ್ದಾರೆ. ಪಕ್ಷದ ನಾಯಕರು ಸಹ ಮಾಲೂರು ಕ್ಷೇತ್ರ ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ನಿಮಗೇ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಬಿಜೆಪಿ ಸಂಭವನೀಯ ಪಟ್ಟಿಯಲ್ಲಿ ಕೃಷ್ಣಯ್ಯಶೆಟ್ಟಿ ಅವರ ಹೆಸರು ಇಲ್ಲದಿರುವುದರಿಂದ ಹಾಗೂ ಟಿಕೆಟ್ ವಿಚಾರವಾಗಿ ಪಕ್ಷದ ನಾಯಕರು ಮುಕ್ತವಾಗಿ ಏನನ್ನೂ ಹೇಳದಿರುವುದರಿಂದ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಹೀಗಾಗಿ ಮಾ.26ರೊಳಗೆ ಟಿಕೆಟ್ ಪ್ರಕಟಿಸದಿದ್ದಲ್ಲಿ ವಿಶೇಷ ಸಭೆ ಸೇರಿ ತಮ್ಮ ಮುಖಂಡನಿಗೆ ಧೈರ್ಯ ಹಾಗೂ ಕೆಜೆಪಿ, ಬಿ.ಎಸ್.ಆರ್ ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ಪಕ್ಷದಿಂದ ಸ್ಪರ್ಧಿಸಲು ಮುಂದಾದರೂ ಬೆಂಬಲ ನೀಡುವುದಕ್ಕೆ ಸಭೆಯಲ್ಲಿ ನಿರ್ಧರಿಸಲು ಮುಂದಾಗಿದ್ದಾರೆ.
ಕುಮಾರಸ್ವಾಮಿ ಭೇಟಿ?: ಈ ನಡುವೆ ಕೃಷ್ಣಯ್ಯಶೆಟ್ಟಿ ಅವರು ಸೋಮವಾರ ಬೆಳಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ರಹಸ್ಯವಾಗಿ ಭೇಟಿ ಮಾಡಿದ್ದಾರೆಂಬ ವದಂತಿ ಮಾಲೂರಿನಲ್ಲಿ ಸಂಚಲನ ಮೂಡಿಸಿದೆ. ಜತೆಗೆ ಇದು ಜೆಡಿಎಸ್ನಲ್ಲಿ ಮತ್ತು ಬಿಜೆಪಿಯಲ್ಲಿ ದಿಗ್ಭ್ರಮೆ ಮೂಡಿಸಿದೆ.
ಶೆಟ್ಟಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪನವರೇ ಸ್ವತಃ ಆಸಕ್ತಿ ವಹಿಸಿದ್ದಾರೆಂಬ ಮಾತೂ ಸಹ ಕೇಳಿಬಂದಿದೆ.
ಮಾಲೂರು ಕ್ಷೇತ್ರದಿಂದ ಸ್ಪರ್ಧಿಸಲು ಕಳೆದ ಒಂದು ವರ್ಷದಿಂದ ದಾನ- ಧರ್ಮದ ಮೂಲಕ ತಾಲೀಮು ನಡೆಸಿರುವ ಹೊಸಕೋಟೆ ತಾಲೂಕಿನ ಮಂಜುನಾಥಗೌಡ ಟಿಕೆಟ್ ನಿರೀಕ್ಷೆಯಲ್ಲಿ ಇರುವಾಗಲೇ ಕೃಷ್ಣಯ್ಯಶೆಟ್ಟಿ ಮತ್ತು ಕುಮಾರಸ್ವಾಮಿ ಭೇಟಿಯ ವದಂತಿ ಮಂಜುನಾಥಗೌಡರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.
ಒಂದು ವೇಳೆ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ಅನ್ನು ಅಪ್ಪಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಮಾಲೂರು ಕ್ಷೇತ್ರದ ಅನೇಕ ಮುಖಂಡರು ಮಂಜುನಾಥಗೌಡರಿಗಿಂತ ಸ್ಥಳೀಯರೇ ಮೇಲು ಎಂಬ ತೀರ್ಮಾನಕ್ಕೆ ಬಂದಲ್ಲಿ ಮಂಜುನಾಥಗೌಡರ ಒಂದು ವರ್ಷದ ಶ್ರಮ ವ್ಯರ್ಥವಾಗುವುದು ಖಚಿತ.
ಕಾಂಗ್ರೆಸ್ ಪಕ್ಷಕ್ಕೆ ಸೇರಿದರೆ ಎಲ್ಲದಕ್ಕೂ ಹೈಕಮಾಂಡ್ ಅನ್ನು ಅವಲಂಬಿಸಬೇಕಾಗುತ್ತದೆ. ಜೆಡಿಎಸ್ ಸೇರಿದರೆ ಈ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ಬಿಜೆಪಿ ಟಿಕೆಟ್ ನಿರಾಕರಿಸಿದಲ್ಲಿ ಶೆಟ್ಟಿ ಜೆಡಿಎಸ್ ಕಡೆ ವಾಲಬಹುದೆಂದು ಹೇಳುತ್ತಿರುವ ಅವರ ಬೆಂಬಲಿಗರು, ಮಾ.27ರಂದು ಈ ಬಗ್ಗೆ ನಮ್ಮ ನಿಲುವು ಸ್ಪಷ್ಟಪಡಿಸುವುದಾಗಿ ತಿಳಿಸಿದ್ದಾರೆ. ಶೆಟ್ಟರು ಒಂದು ವೇಳೆ ಬಿಜೆಪಿ ತೊರೆದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ಉದ್ದೇಶಿಸಿರುವ ಜಿಪಂ ಮಾಜಿ ಸದಸ್ಯ ರಾಮೇಗೌಡ, ಮಂಜುನಾಥಗೌಡ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆಂಬುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ನಿಂದ ಮಾಜಿ ಶಾಸಕ ಎ.ನಾಗರಾಜ್, ವಕೀಲರಾದ ಸೋಮಶೇಖರ್, ಕೆಪಿಸಿಸಿಯ ಪದಾಧಿಕಾರಿ ರಘುನಾಥ್ ಅವರು ಸ್ಪರ್ಧಿಸಲು ಪೈಪೋಟಿ ನೀಡುವ ಸಾಧ್ಯತೆ ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.