ಮರೆಯಾದ ಮರ್ಯಾದವಂತರು
ಕೋಲಾರ: ಜಿಲ್ಲೆಯವರೇ ಆದ ಕ್ಯಾಸಂಬಳ್ಳಿ ಚಂಗಲರಾಯರೆಡ್ಡಿ (ಕೆ.ಸಿ.ರೆಡ್ಡಿ) ಅವರನ್ನು ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನಾಗಿ ನೀಡಿದ ಕೀರ್ತಿ ಅಖಂಡ ಕೋಲಾರ ಜಿಲ್ಲೆಗೆ ಸಲ್ಲಿದೆ.
ರೈತ ಚಳವಳಿ, ಎಡ ಪಂಥೀಯ ಆಂದೋಲನಗಳ ಮೂಲಕ ಕೆಲವರು ಜಿಲ್ಲೆಗೆ ಮತ್ತು ರಾಜ್ಯಕ್ಕೆ ತಮ್ಮದೇ ಕಾಣಿಕೆ ನೀಡಿದ್ದಾರೆ.
ಹಾಗೆಯೇ ಬದಲಾದ ರಾಜಕಾರಣದಿಂದ ಕಾಂಗ್ರೆಸ್, ಜನತಾ ಪರಿವಾರಕ್ಕೆ ಸೇರಿ ಅಲ್ಲಿಂದಲೂ ರಾಜ್ಯ ವಿಧಾನಸಭೆಗೆ ಆಯ್ಕೆಯಾದವರಲ್ಲಿ ಹಲವರು ಸರಳ, ಸಜ್ಜನಿಕೆ ಹಾಗೂ ದಕ್ಷ ಆಡಳಿತ ನೀಡುವ ಮೂಲಕ ಉತ್ತಮ ಜನಪ್ರತಿನಿಧಿ ಎಂದು ಖ್ಯಾತಿ ಹೊಂದಿದ್ದಾರೆ.
1978ರಿಂದ 2003ರವರೆಗೆ ನಡೆದಿದ್ದ ಚುನಾವಣೆಯಲ್ಲಿ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗೆ ಸೇರಿದ 12 ವಿಧಾನಸಭಾ ಕ್ಷೇತ್ರಗಳಿಗೆ ಮತದಾರರು ಅನೇಕ ಉತ್ತಮರನ್ನು ಆಯ್ಕೆ ಮಾಡಿದ್ದರು. 1978ರಲ್ಲಿ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಅಬ್ದುಲ್ ಲತೀಫ್ ಆಯ್ಕೆಯಾಗಿದ್ದರು. ಅಲ್ಪಸಂಖ್ಯಾತರಾಗಿದ್ದರೂ ಲತೀಫ್, ಕ್ಷೇತ್ರದಲ್ಲಿ ಯಾವುದೇ ಜಾತಿ-ಧರ್ಮ ಸಂಘರ್ಷಣೆಗೆ ಅವಕಾಶ ನೀಡಿರಲಿಲ್ಲ. ಅಧಿಕಾರ ಸಿಕ್ಕಿದೆ ಎಂದು ಯಾರ ಮೇಲೂ ದರ್ಪ ತೋರಿರಲಿಲ್ಲ, ಜನತೆಯೇ ನೀಡಿದ ಹಣದಿಂದ ಚುನಾವಣೆ ಎದುರಿಸಿದ್ದರು. ಆ ಕಾಲದಲ್ಲೇ ಇವರು 26,576 ಮತಗಳನ್ನು ಗಳಿಸಿ ಜನಪ್ರಿಯತೆ ಗಳಿಸಿದ್ದರು. ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಾವುದೇ ಹಗರಣ, ಭ್ರಷ್ಟಾಚಾರಕ್ಕೆ ಸಿಲುಕಿರಲಿಲ್ಲ ಎಂಬುದು ಪ್ಲಸ್ ಪಾಯಿಂಟ್.
ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಚನ್ನಪ್ಪ: ಬೇತಮಂಗಲ ಕ್ಷೇತ್ರವಾಗಿದ್ದಾಗ 1985ರಲ್ಲಿ ಎ.ಚನ್ನಪ್ಪ ಜನತಾಪಕ್ಷದಿಂದ ಗೆದ್ದಿದ್ದರು. ಅತ್ಯಂತ ಸರಳ ವ್ಯಕ್ತಿ, ಬೆಂಗಳೂರಿಗೆ ಸರ್ಕಾರಿ ಬಸ್ಸಿನಲ್ಲೇ ಓಡಾಡುತ್ತಿದ್ದರು. ಬಂಗಾರಪೇಟೆಗೆ ಜನತೆಯ ಕೆಲಸ ನಿಮಿತ್ತ ಬಂದಾಗ ಯಾವುದೇ ವಾಹನ ಬಳಸುತ್ತಿರಲಿಲ್ಲ. ತಮ್ಮ ಬಳಿಗೆ ಯಾರೇ ಬರಲಿ, ಎಷ್ಟೇ ಚಿಕ್ಕವರಾಗಿರಲಿ ಪ್ರೀತಿಯಿಂದ ಮಾತನಾಡಿಸಿ, ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.
ಕೆಜಿಎಫ್ನಿಂದ 1985ರಲ್ಲಿ ಸಿಪಿಐಎಂನಿಂದ ಗೆದ್ದಿದ್ದ ಟಿ.ಎಸ್.ಮಣಿ, ಮುಳಬಾಗಿಲಿನಿಂದ 1978ರಲ್ಲಿ ಕಾಂಗ್ರೆಸ್ಸಿನಿಂದ ಗೆದ್ದ ಜೆ.ಎಂ.ರೆಡ್ಡಿ, 1983ರಲ್ಲಿ ಪಕ್ಷೇತರರಾಗಿ ಜಯ ಸಾಧಿಸಿದ್ದ ಬೀರೇಗೌಡ, 1985ರಲ್ಲಿ ಸಿಎಂಎಂನಿಂದ ಸ್ಪರ್ಧಿಸಿದ್ದ ಆರ್.ವೆಂಕಟರಾಮಯ್ಯ, ಚಿಂತಾಮಣಿಯಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ಚೌಡರೆಡ್ಡಿ, ಮಾಲೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದ ಪಿ.ಎನ್.ರೆಡ್ಡಿ, ಚಿಕ್ಕಬಳ್ಳಾಪುರದಿಂದ 1983ರಲ್ಲಿ ಪಕ್ಷೇತರರಾಗಿ ಗೆದ್ದ ಎ.ಮುನಿಯಪ್ಪ, 1985ರಲ್ಲಿ ಜನತಾಪಕ್ಷದಿಂದ ಗೆದ್ದ ಪೇಪರ್ ಕೆ.ಎಂ.ಮುನಿಯಪ್ಪ, ಕೋಲಾರದ ಆರ್.ವೆಂಕಟರಾಮಯ್ಯ, ಬಾಗೇಪಲ್ಲಿಯಲ್ಲಿ ಸಿಪಿಎಂನ ಎ.ವಿ.ಅಪ್ಪಸ್ವಾಮಿರೆಡ್ಡಿ, ಗೌರಿಬಿದನೂರಿನಲ್ಲಿ ಆರ್.ಎನ್.ಲಕ್ಷ್ಮೀಪತಿ ಅವರುಗಳು ಚುನಾವಣೆಗೆ ಯಾವುದೇ ರೀತಿಯ ಬಂಡವಾಳ ಹಾಕದೆ, ಭ್ರಷ್ಟರ ಸಹಾಯ ಕೇಳದೆ ಜನತೆಯ ಮೂಲಕವೇ ಚುನಾವಣೆ ಎದುರಿಸಿ ಸರಳ, ಸಜ್ಜನಿಕೆ ಹಾಗೂ ದಕ್ಷ ಆಡಳಿತದ ಮೂಲಕ ಹೆಸರು ಮಾಡಿದ್ದಾರೆ.
ಜನಾನುರಾಗಿ ಪೇಪರ್ ಮುನಿಯಪ್ಪ: ಚಿಕ್ಕಬಳ್ಳಾಪುರದಲ್ಲಿ 1985ರಲ್ಲಿ ಪೇಪರ್ ಮುನಿಯಪ್ಪ ಚುನಾವಣೆಗೆ ಸ್ಪರ್ಧಿಸಿದಾಗ ಅನೇಕರು ಕಾಲಿಗೆ ಚಪ್ಪಲಿ, ಮೈತುಂಬ ಬಟ್ಟೆ ಹಾಕಿಕೊಳ್ಳುವುದಕ್ಕೆ ಗತಿ ಇಲ್ಲದವನಿಗೆ ಎಲೆಕ್ಷನ್ ಏಕೆ ಎಂದು ನಿಂದಿಸಿದ್ದರು. ದೇವೇಗೌಡರ ಮನೆಗೆ ಸ್ನೇಹಿತರು ಮುನಿಯಪ್ಪವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಲು ಹೋಗಿದ್ದಾಗ ಇನ್ನಿತರ ಟಿಕೆಟ್ ಆಕಾಂಕ್ಷಿಗಳು ನೆರವಾಗಿಯೇ ನಿಂದಿಸಿದಾಗ ಕಣ್ಣೀರಿಟ್ಟು ದೇವೇಗೌಡರ ಮನೆಯಿಂದ ಹೊರ ಬಂದಿದ್ದರು. ಆದರೆ, ಚಿಕ್ಕಬಳ್ಳಾಪುರ ಜನತೆ ಮುನಿಯಪ್ಪನವರ ಸರಳ ಜೀವನ, ಜನಸ್ಪಂದನೆಯನ್ನು ಗೌರವಿಸಿ ವಿಧಾನಸಭೆಗೆ ಆಯ್ಕೆ ಮಾಡಿದ್ದರು. ಕಳೆದ 10 ವರ್ಷಗಳಿಂದ ಅಖಂಡ ಕೋಲಾರ ಜಿಲ್ಲೆಯಲ್ಲಿ ರಾಜಕಾರಣ ಬದಲಾಗಿದೆ. ಬಂಡವಾಳಷಾಯಿಗಳ ಮುಂದೆ ಸಭ್ಯರು, ಸಜ್ಜನರು ಸ್ಪರ್ಧಿಸದಂತಾಗಿದೆ. ಮತದಾರರ ಮನಸ್ಥಿತಿ ಬದಲಾವಣೆ ಆದರೆ ಮಾತ್ರ ಮತ್ತೆ ಅಖಂಡ ಕೋಲಾರ ಜಿಲ್ಲೆಯಲ್ಲಿ ಉತ್ತಮರು ವಿಧಾನಸಭೆಗೆ ಆಯ್ಕೆಯಾಗಿ ಜನತೆಯ ಕಷ್ಟ-ಸುಖಗಳಿಗೆ ಸ್ಪಂದಿಸುವ ಕಾಲ ನೋಡಲು ಸಾಧ್ಯವಾಗಬಹುದು.
- ಪಾ.ಶ್ರೀ.ಅನಂತರಾಮ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.