ವಿದ್ಯುತ್ ಇಲಾಖೆ ನಿರ್ಲಕ್ಷ್ಯ: ಶೋಭಾ
ಪಾವಗಡ: ರಾಜ್ಯ ಬಿಜೆಪಿ ಮುಖಂಡರು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿ ವಿದ್ಯುತ್ ಇಲಾಖೆ ಬಗ್ಗೆ ನಿರ್ಲಕ್ಷ್ಸಿಸಿದ ಪರಿಣಾಮ ಜನತೆ ತೀವ್ರ ವಿದ್ಯುತ್ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಪಟ್ಟಣದಲ್ಲಿ ಏರ್ಪಾಡಿಸಿದ್ದ ಕೆಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ತಾವು ಇಂಧನ ಖಾತೆ ಸಚಿವರಾಗಿದ್ದ ಸಂದರ್ಭ ಇಲ್ಲಿನ ರೈತರು, ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆ ಹಿನ್ನೆಲೆಯಲ್ಲಿ ಪಾವಗಡಕ್ಕೆ ಸುಮಾರು 70 ಕೋಟಿ ವೆಚ್ಚದ 22 ಕೆವಿ ವಿದ್ಯುತ್ ಉಪಘಟಕ ಮಂಜೂರು ಮಾಡಿರುವುದಾಗಿ ತಿಳಿಸಿದರು. ಇಂಧನ ಖಾತೆ ಸಚಿವೆ ಆಗಿದ್ದ ಸಂದರ್ಭದಲ್ಲಿ ರಾಜ್ಯಕ್ಕೆ 24ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತಿತ್ತು ಎಂದರು. ರಾಜ್ಯದಲ್ಲಿ ಕೆಜೆಪಿ ಪ್ರಬಲವಾಗಿದ್ದು ಜೆಡಿಎಸ್ನಿಂದ ಮಾಚಿ ಸಚಿವ ಎಚ್.ನಿಂಗಪ್ಪ ಸೇರಿ ಬಿಜೆಪಿ, ಜೆಡಿಎಸ್ನಿಂದ ರಾಜ್ಯದ ಅನೇಕ ಮುಖಂಡರು ಕೆಜೆಪಿಗೆ ಸೇರ್ಪಡೆಯಾಗುವ ಸಿದ್ಧತೆಯಲ್ಲಿದ್ದಾರೆ. ಪಾವಗಡ ತಾಲೂಕಿನಲ್ಲಿ ಸದಾ ಬರ, ಕುಡಿವ ನೀರು, ನಿರುದ್ಯೋಗ ಸಮಸ್ಯೆ ಸೇರಿದಂತೆ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿದ್ದು ನಂಜುಂಡಪ್ಪ ವರದಿಯಂತೆ ಇಲ್ಲಿ ಅಭಿವೃದ್ಧಿಯಾಗಬೇಕಿದೆ. ವಿದ್ಯುತ್, ಬರ ನಿರ್ವಹಣೆ ಸೇರಿ ಜ್ವಲಂತ ಸಮಸ್ಯೆ ನಿವಾರಣೆಗೆ ಇಲ್ಲಿನ ಕೆಜೆಪಿ ಅಭ್ಯರ್ಥಿ ಪಾವಗಡ ಶ್ರೀರಾಮ್ ಅವರನ್ನು ಗೆಲ್ಲಿಸಿ ಎಂದರು. ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೆ.ಎಚ್. ಶ್ರೀನಿವಾಸ್ ಎಂ.ಡಿ. ಲಕ್ಷ್ಮೀನಾರಾಯಣ್, ರವಿಕುಮಾರ್, ಮುಕ್ಕಡಪ್ಪ ಸಂತೋಷ್, ಅಭ್ಯರ್ಥಿ ಪಾವಗಡ ಶ್ರೀರಾಮ್, ಶಿವಕುಮಾರ್, ರವಿಶಂಕರ್ನಾಯಕ್, ಜಯರಾಮ್ ಇದ್ದರು.
30ಕ್ಕೆ ಮಾಲೂರಿಗೆ ಶಂಕರಭಾರತಿಶ್ರೀ
ಮಾಲೂರು: ಕೆ.ಆರ್.ನಗರ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ ಹಾಗೂ ವೇದಾಂತ ಭಾರತಿ ಸಂಸ್ಥೆಯ ಸಂರಕ್ಷಕರಾದ ಶಂಕರಭಾರತಿ ಮಹಾಸ್ವಾಮಿರವರು 30 ರಂದು ಮಾಲೂರಿಗೆ ಆಗಮಿಸಲಿದ್ದು,ಪಟ್ಟಣದಲ್ಲಿ ನಡೆಯಲಿರುವ ಆನಂದ ಸಿಂಧು ಸ್ತೋತ್ರ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸೌಂದರ್ಯ ಲಹರಿ ಸಂಚಾಲನಾ ಸಮಿತಿಯ ಸಂಚಾಲಕಿ ಆಶಾ ತಿಳಿಸಿದ್ದಾರೆ. ಮೇ 19 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿರುವ ಶ್ರೀ ಆದಿ ಶಂಕರಾಚಾರ್ಯ ವಿರಚಿತ ಆನಂದ ಸಿಂಧು ಸ್ತೋತ್ರ ಸಮರ್ಪಣಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಚಾಲನೆ ನೀಡಲು ಶ್ರೀಗಳು ಆಗಮಿಸುತ್ತಿದ್ದಾರೆ ಎಂದಿದ್ದಾರೆ.
ಎಸ್ಆರ್ಇಟಿ ಪ್ರೌಢಶಾಲೆ: ಅರ್ಜಿ
ಚಿಂತಾಮಣಿ: ಎಸ್ಆರ್ಇಟಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪ್ರಕಟಗೊಂಡ 21 ದಿನಗಳ ಒಳಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಸಂಸ್ಥೆಯ ಕಾರ್ಯದರ್ಶಿ ಕೆ.ನಾರಾಯಣಸ್ವಾಮಿ ತಿಳಿಸಿದ್ದಾರೆ. ನಗರದ ಬಾಗೇಪಲ್ಲಿ ವೃತ್ತದ ಬಳಿ ಇರುವ ಎಸ್ಆರ್ಇಟಿ ಖಾಸಗಿ ಪ್ರೌಢಶಾಲೆ ವತಿಯಿಂದ 2013ನೇ ಸಾಲಿನಿಂದ ಸಹಾಯಧನಕ್ಕೆ ಒಳಪಟ್ಟಿದ್ದು, ಅನುದಾನಿತ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹ ಶಿಕ್ಷಕರು ಆಂಗ್ಲ, ಬಿ.ಎ, ಬಿ.ಎಡ್ ಪರಿಶಿಷ್ಟ ವರ್ಗ 1 ಸ್ಥಾನ; ಸಹ ಶಿಕ್ಷಕರು ವಿಜ್ಞಾನ, ಸಿ.ಪಿ.ಜಡ್, ಬಿ.ಎಸ್ಸಿ,ಬಿ.ಎಡ್, ಪರಿಶಿಷ್ಟ 1 ಸ್ಥಾನ; ಸಹ ಶಿಕ್ಷಕರು, ಕನ್ನಡ ಬಿ.ಎ, ಬಿ.ಇಡಿ, ಐಚ್ಚಿಕ ಕನ್ನಡ ಸಾಮಾನ್ಯ 1 ಸ್ಥಾನ;ಡಿ ದರ್ಜೆ ನೌಕರರು ಎಸ್ಎಸ್ಎಲ್ಸಿ, 1 ಸ್ಥಾನ ಸಾಮಾನ್ಯ ವರ್ಗ.
ವ್ಯಕ್ತಿ ಕೊಲೆ
ಚಿಂತಾಮಣಿ: ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಕೃಷ್ಣಾಪುರದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ. ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾಪುರ ಗ್ರಾಮದ ಶಂಕರ ಎಂಬಾತನಿಗೂ ತನ್ನ ಸಂಬಂಧಿಕರಾದ ವೆಂಕಟರಾಯಪ್ಪ ಎಂಬವರ ಜತೆ ಜಮೀನು ವಿಷಯವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು. ಸೋಮವಾರ ಶಂಕರ್ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ವೆಂಕಟರಾಯಪ್ಪ ಅಲಿಯಾಸ್ ಪೆದ್ದನ್ನ ಎಂಬವರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಮೀರಿದ ಪರಿಣಾಮ ಕುಪಿತಗೊಂಡ ವೆಂಕಟರಾಯಪ್ಪ ಮಾರಕಾಸ್ತ್ರದಿಂದ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.