ಕ.ಪ್ರ. ವಾರ್ತೆ ಬಾಗೇಪಲ್ಲಿ ಮಾ.30
ಅನ್ನದಲ್ಲಿ ಹುಳ ಬಿದ್ದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ರಸ್ತೆಗೆ ಊಟ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದ ಹೊರ ವಲಯದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ನಡೆದಿದೆ.
ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಹಾಗೂ ಬಿಸಿಎಂ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಹಲವು ತಿಂಗಳಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ರೀತಿಯಲ್ಲಿ ಊಟ ನೀಡುತ್ತಿಲ್ಲ, ಸಾಂಬರ್‌ನಲ್ಲಿ ಸರಿಯಾಗಿ ತರಕಾರಿ ಇರುವುದಿಲ್ಲ. ಬೇಳೆ ತೊಳೆಯದೆ ಹಾಕುವುದು. ವಗ್ಗರಣೆಗೆ ಎಣ್ಣೆ ಹಾಕುವುದಿಲ್ಲ. ಅಕ್ಕಿ ಸ್ವಚ್ಛ ಮಾಡದೆ ಹಾಕಿ ಬೇಯಿಸುತ್ತಾರೆ ಹುಳು ಇದ್ದರೂ, ಹಾಗೆಯೇ ಊಟ ಮಾಡಬೇಕು. ಇಲ್ಲದಿದ್ದಲ್ಲಿ ಉಪವಾಸವಿರಬೇಕು ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ, ಮೇಲ್ವಿಚಾರಕರು ಮಾತ್ರ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುವ ಮೂಲಕ ಕಾಟಾಚಾರಕ್ಕೆ ವಿದ್ಯಾರ್ಥಿ ನಿಲಯಕ್ಕೆ ಅಪರೂಪಕ್ಕೊಮ್ಮೆ ಬಂದು ಹೋಗುತ್ತಾರೆ. ವಿದ್ಯಾರ್ಥಿಗಳ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ ಎಂದು ದೂರಿದರು. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ತಿಂಡಿ ಇಲ್ಲದಿದ್ದರೆ ನಾವು ಪರೀಕ್ಷೆ ಬರೆಯುವುದು ಹೇಗೆ ಎಂದು ಪ್ರಶ್ನಿಸಿದ ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಊಟವನ್ನು ಸಮರ್ಪಕ ರೀತಿಯಲ್ಲಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ವಿ.ಮುನಿಯಪ್ಪ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ತಕ್ಷಣ ಬೇರೆ ಅಡುಗೆ ತಯಾರಿಸಿ ವಿದ್ಯಾರ್ಥಿಗಳು ಊಟ ಸೇವಿಸುವಂತೆ ಮನವೊಲಿಸಿದರು. ರವಿ, ರವಣಪ್ಪ, ರಘು, ರವಿಕುಮಾರ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.