ಕನ್ನಡ ನಾಡು ಬಲಿಷ್ಠಗೊಳಿಸಲು ಖಾದರ್ ಕರೆ
ಕ.ಪ್ರ.ವಾರ್ತೆ ಕೋಲಾರ ನ.1
ಕನ್ನಡ ನಾಡನ್ನು ಬಲಿಷ್ಠಗೊಳಿಸಲು ಯುವಕರು ಪಣ ತೋಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗ ಯು.ಟಿ. ಖಾದರ್ ಕರೆ ನೀಡಿದರು.
ನಗರದ ಮಹಾತ್ಮಾಗಂಧಿ ಉದ್ಯಾನವನದ ಬಳಿ ಶನಿವಾರ ಜಿಲ್ಲಾ ಆಡಳಿತ ಮತ್ತು ಶ್ರೀ ಭುವನೇಶ್ವರಿ ಕನ್ನಡ ಕಲಾ ಸಂಘದಿಂದ ಹಮ್ಮಿಕೊಂಡಿದ್ದ 58ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಾಡಿನ ಹಿರಿಯರ ಪರಿಶ್ರಮ, ತಾಳ್ಮೆ, ಸಹಕಾರದಿಂದಾಗಿ ಕನ್ನಡ ನಾಡು ಸ್ವಾಭಿಮಾನಿ ಕರ್ನಾಟಕವಾಗಿ ರೂಪುಗೊಂಡಿದೆ. ಇಂದಿನ ಯುವಕರು ಹಿರಿಯರ ಮಾರ್ಗದರ್ಶನ ಹಾಗೂ ಅವರು ನೀಡಿರುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎದರು.
ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿವಿಜಿ ಸೇರಿದಂತೆ ಅನೇಕ ಮಹನೀಯರು ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರನ್ನು ಆದರ್ಶವಾಗಿಟ್ಟುಕೊಂಡು ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕಾಗಿದೆ. ನಮ್ಮಲ್ಲಿ ಯಾವುದೇ ದ್ವೇಷ, ಹಗೆತನಕ್ಕೆ ಅವಕಾಶವಿಲ್ಲ, ಕರ್ನಾಟಕದಲ್ಲಿ ನೆಲಸಿರುವ ಪ್ರತಿಯೊಬ್ಬರು ಕನ್ನಡಕ್ಕೆ ಗೌರವ ನೀಡಬೇಕು, ಹಾಗೆಯೇ ಕನ್ನಡದ ಜೊತೆಗೆ ಬೇರೆ ಭಾಷೆಗಳನ್ನು ಗೌರವಿಸಬೇಕೆಂದರು.
ಕನ್ನಡಿಗರು ಎಲ್ಲೇ ಇದ್ದರೂ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕಾಂತ್ರಿಕಾರಿ ಬದಲಾವಣೆಗಾಗಿ ಯುವಕರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. ಯಾವುದೇ ಒಬ್ಬ ರಾಜಕಾರಣಿ ಅಥವಾ ಸಾರ್ವಜನಿಕರು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟಕೊಂಡು ಕೆಲಸ ಮಾಡುವುದರಿಂದ ನಾಡಿನ ಅಭಿವೃದ್ಧಿ ಆಗುವುದಿಲ್ಲ. ಜನತೆಯ ಭವಿಷ್ಯಕ್ಕಾಗಿ ಕೆಲಸ ಮಾಡುವ ಮನೋಭಾವನೆ ರೂಢಿಸಿಕೊಳ್ಳಬೇಕು, ಕನ್ನಡಿಗರೆಲ್ಲ ಒಂದೇ ತಾಯಿಯ ಮಕ್ಕಳು, ಯಾವುದೇ ಕಾರಣಕ್ಕೂ ನಮ್ಮಲ್ಲಿ ವ್ಯತ್ಯಾಸಗಳು ಉಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆಯ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಕನ್ನಡ ರಾಜ್ಯೋತ್ಸವ ಭದ್ರ ಬುನಾದಿ ಆಗಬೇಕಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಲ್ಲಿ ಜಿಲ್ಲೆ ರಾಜ್ಯದಲ್ಲೇ ನಂಬರ್ ಸ್ಥಾನಕ್ಕೆ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನರೇಗಾ ಯೋಜನೆಯಲ್ಲಿ ಜಿಲ್ಲೆ ಈಗ 25 ಸ್ಥಾನದಿಂದ 15ಕ್ಕೆ ತಲುಪಿದ್ದು ಮುಂದಿನ ದಿನಗಳಲ್ಲಿ ನಂ.1 ಸ್ಥಾನಕ್ಕೆ ಏರಲು ಜನತೆಯ ಸಹಕಾರ ಅತಿಮುಖ್ಯವೆಂದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಜಿ.ಪಂ. ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಡಿಸಿ ಡಿ.ಕೆ. ರವಿ, ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ, ಜಿಲ್ಲಾ ಎಸ್ಪಿ ಡಾ. ರಾಮ್ನಿವಾಸ್ ಸಾಪಟ್, ಎಡಿಸಿ ವಿಜಯಕುಮಾರ್, ಎಎಸ್ಪಿ ಜಮೀಲ್, ಕೋಲಾರ ತಹಸೀಲ್ದಾರ್ ನಾಗರಾಜ್, ನಗರಸಭೆ ಆಯುಕ್ತ ಜಗದೀಶ್, ಕಾಂಗ್ರೆಸ್ ಮುಖಂಡರಾದ ಅತ್ತಾವುಲ್ಲಾ, ಇಕ್ಬಾಲ್, ನಗರಸಭೆ ಸದಸ್ಯರಾದ ಮುರಳಿಗೌಡ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಜಿಲ್ಲಾ ದೈಹಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಬಸವರಾಜಜ್ಚಿಲಕಾಂತ ಮಠ ನಿರೂಪಿಸಿ, ಶ್ರೀ ಭುವನೇಶ್ವರಿ ಕನ್ನಡ ಕಲಾ ಸಂಘದ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಸ್ವಾಗತಿಸಿದರು.