ಕಾರ್ಮಿಕರ ಹಿತ ಕಾಯುವಲ್ಲಿ ಕೇಂದ್ರ ಸರ್ಕಾರ ವಿಫಲ
ಕೆಜಿಎಫ್: ಕೇಂದ್ರ ಸರ್ಕಾರ ಬಿಜಿಎಂಎಲ್ ಚಿನ್ನದ ಗಣಿಗಳನ್ನು ಮುಚ್ಚಿದ ನಂತರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದೆ ದೇಶಕ್ಕೆ ಚಿನ್ನಕೊಟ್ಟ ಕೈಗಳಿಗೆ ಕೇಂದ್ರ ಸರ್ಕಾರ ಅನ್ನಕೊಡಲು ಮರೆತಿದೆ ಎಂದು ಮಾಜಿ ಶಾಸಕ ವೈ. ಸಂಪಂಗಿ ಆರೋಪಿಸಿದರು.
ಬಿಜಿಎಂಎಲ್ ಗ್ಲೋಬಲ್ ಕಾರ್ಮಿಕ ಸಹಕಾರ ಸಂಘದ ವತಿಯಿಂದ ಎಸ್.ಟಿ.ಬಿ.ಪಿ ವಿಆರ್ಎಸ್ ಪಡೆದ 3100 ಕಾರ್ಮಿಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ತಲಾ 1000 ರು.ಗಳ ಪರಿಹಾರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, 2001ರಿಂದ ಕಾರ್ಮಿಕರ ಸಂಕಷ್ಟಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೂ ಕಾರ್ಮಿಕ ಸಂಘಗಳು ಸಂಕಷ್ಟಗಳಿಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಕೆಲ ಕಾರ್ಮಿಕ ಸಂಘದ ಮುಖಂಡರು ವೈಯುಕ್ತಿಕ ಲಾಭಕ್ಕಾಗಿ ಹಾಗೂ ರಾಜಕಾರಣಗಳ ಕೈಗೊಂಬೆಯಾಗಿ ಇಂತಹ ಕಾರ್ಯಕ್ರಮಗಳಿಗೆ ವಿನಾಕಾರಣ ಅಡ್ಡಿಪಡಿಸುವುದು ಕಾರ್ಮಿಕರ ಹಿತದೃಷ್ಟಿಯಿಂದ ಸೂಕ್ತವಲ್ಲ ಎಂದರು.
ಈ ವೇಳೆ ಬಿಜಿಎಂಎಲ್ ಗ್ಲೋಬಲ್ ಕಾರ್ಮಿಕರ ಸಹಕಾರ ಸಂಘದ ಲೂಯಿಸ್, ಪುರುಷೋತ್ತಮನ್, ರಾಘವಲು, ರಾಮು, ಸುರೇಶ್, ಗಿರೀಶ್, ಅನ್ಬು, ಶ್ವಂತರಾಜ್, ಗುಣಶೇಖರನ್ ಇದ್ದರು.