ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲೆಯ ರೈಲು ಸಂಚಾರಕ್ಕೆ ಶತಕದ ಇತಿಹಾಸ

Rashmi Kasaragodu
Updated On : 2 Nov 2013, 12:47 pm

ರೂಪಸಿ ರಮೇಶ್
ಶಿಡ್ಲಘಟ್ಟ: ದಶಕಗಳ ಹಿಂದೆ ಸಂಚಾರ ನಿಲ್ಲಿಸಿದ ಜಿಲ್ಲೆಯ ರೈಲು ಸಂಚಾರ ಕೆಲವೇ ದಿನಗಳಲ್ಲಿ ಪುನಾರಂಭವಾಗಲಿದೆ.
ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಜಿಲ್ಲೆಯ ಸರ್.ಎಂ. ವಿಶ್ವೇಶ್ವರಯ್ಯನವರ ಸತತ ಪರಿಶ್ರಮದಿಂದ 1918 ರಲ್ಲಿ ಪ್ರಾರಂಭಿಸಲಾಗಿದ್ದ ನ್ಯಾರೂಗೇಜ್ ರೈಲು ಸಂಚಾರ ನಷ್ಟದ ಕಾರಣ ತೋರಿಸಿ 1993-94ರಲ್ಲಿ ನಿಲ್ಲಿಸಲಾಗಿತ್ತು. 1999ರಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ತಾಲೂಕು ಕನ್ನಡ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನ್ಯಾರೂಗೇಜ್ ರೇಲ್ವೆ ಹೋರಾಟ ಪ್ರಾರಂಬಿಸಲಾಯಿತು. ನಂತರದ ದಿನಗಳಲ್ಲಿ ಹೋರಾಟಕ್ಕೆ ಜಿಲ್ಲಾ ಮಟ್ಟದ ಸಮಿತಿ ರಚಿಸಿ ಹಿರಿಯ ಪತ್ರಕರ್ತ ಎಂ.ಜಿ. ಪ್ರಭಾಕರ್ ನೇತೃತ್ವದಲ್ಲಿ ಕೋಲಾರ ಜಿಲ್ಲಾ ಹೋರಾಟ ಸಮಿತಿ ರಚಿಸಲಾಯಿತು.
2001ರ ಮಾರ್ಚ್ನಲ್ಲಿ ತಾಲೂಕಿನ ಎಲ್ಲಾ ಕನ್ನಡ ಪರ ಸಂಘಟನೆಗಳ ಮತ್ತು ರಾಜಕೀಯ ಪಕ್ಷಗಳ ಮುಖಂಡರನ್ನೊಳಗೊಂಡ ರೇಲ್ವೆ ಹೋರಾಟ ಸಮಿತಿ ರಚಿಸಿ ಬಿ.ಕೆ. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಹೋರಾಟ ತೀವ್ರಗೊಳಸಲಾಯಿತು.
ಹೋರಾಟದ ಮುಂಚೂಣಿಯಲ್ಲಿದ್ದ ಬ.ನಾ. ಪಿಳ್ಳಯ್ಯ ನೇತೃತ್ವದ ತಂಡ ನವ ದೆಹಲಿಗೆ ಹೋಗಿ ಅಂದಿನ ರಾಜ್ಯದ ಸಚಿವರಾದ ಜಾಫರ್ ಷರೀಪ್, ಟಿ.ಎ.ಪೈರನ್ನು ಭೇಟಿ ಮಾಡಿ ಮನವಿ ಅರ್ಪಿಸಲಾಯಿತು. ಸತತ ಚಳುವಳಿ ಮತ್ತು ಜಿಲ್ಲೆಯ ಹಲವೆಡೆ ರೇಲ್ವೆ ತಡೆಗಳಿಂದ ಒತ್ತಡಕ್ಕೊಳಗಾದ ಕೇಂದ್ರ ಸರ್ಕಾರ ರೇಲ್ವೆ ಬಜೆಟ್ನಲ್ಲಿ ಸಮೀಕ್ಷಾ ಕಾರ್ಯಕ್ಕಾಗಿ ಹಣ ಬಿಡುಗಡೆಗೊಳಿಸಿತು. ಆಮೆ ಗತಿಯಲ್ಲಿ ಸಾಗಿದ ಸಮೀಕ್ಷಾ ಕಾರ್ಯ ಮತ್ತು ಯೋಜನಾ ವರದಿಯ ಕಾರ್ಯರೂಪವನ್ನು ಜಾರಿಗೊಳಿಸಲು ಮತ್ತೆ ರೇಲ್ವೆ ಹೋರಾಟ ಪ್ರಾರಂಭಿಸಲಾಯಿತು. ಅಂದಿನ ರೇಲ್ವೆ ರಾಜ್ಯ ಸಚಿವರಾಗಿದ್ದ ಬಸವರಾಜ್ ಪಾಟೀಲ್ ಯತ್ನಾಳ್ರನ್ನು ಭೇಟಿ ಮಾಡಿ ಒತ್ತಡ ತಂದ ಕಾರಣ ರೇಲ್ವೆ ವಿಸ್ತರಣಾ ಕಾರ್ಯವನ್ನು ಚುರುಕುಗೊಳಿಸಲಾಯಿತು.
ಸ್ಥಳಿಯ ಲೋಕಸಬಾ ಸ್ಥಾನವನ್ನು ಪ್ರತಿನಿಧಿಸುತ್ತಿದ್ದ ಕೆ.ಎಚ್. ಮುನಿಯಪ್ಪ ರೇಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾಮಗಾರಿಗಳಿಗಾಗಿ ಹೆಚ್ಚಿನ ಹಣವನ್ನು ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಲು ದಿನಾಂಕವನ್ನು ಗೊತ್ತುಪಡಿಸಿದ್ದರಿಂದಾಗಿ ರೇಲ್ವೆ ಸಂಚಾರಕ್ಕಾಗಿ ಸಿದ್ಧಗೊಳಿಸಲಾಯಿತು.
ನ್ಯಾರೂಗೇಜ್ ರೇಲಿನ ಚರಿತ್ರೆ: 1906ರಲ್ಲಿ ಸಮೀಕ್ಷಾ ಕಾರ್ಯ ಪ್ರಾರಂಭಿಸಿ ಆರ್ಥಿಕ ಅಡಚಣೆ ಕಾರಣ ಸಮೀಕ್ಷಾ ಕಾರ್ಯ ಸ್ಥಗಿತಗೊಳಿಸಲಾಯಿತು. ಆಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರು ಬ್ರೀಟಿಷ್ ಸರ್ಕಾರದ ಮೇಲೆ ಒತ್ತಡ ತಂದ ಕಾರಣ 1911ರಲ್ಲಿ ಸಾರ್ವಜನಿಕರಿಂದ ಡಿಬೆಂಚರ್ ಸಾಲದಿಂದ ಹಣ ಸಂಗ್ರಹಿಸಿ ಅತ್ಯಲ್ಪ ಅವಧಿಯಲ್ಲಿ 4 ಲಕ್ಷ ರು.ಗಳನ್ನು ಸಂಗ್ರಹ ಮಾಡಲಾಯಿತು. 1912 ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ 1913ರ ಡಿಸೆಂಬರ್ 15 ರಂದು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಂಚಾರಕ್ಕೆ ಚಾಲನೆ ನೀಡಿದರು. 1918 ನವೆಂಬರ್ನಲ್ಲಿ ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮುಖಾಂತರ ಬಂಗಾರಪೇಟೆಗೆ ಸಂಚಾರವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು.ಪ್ರಾರಂಭದಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಮೇಲ್ದರ್ಜೆ ಪ್ರಯಾಣಕ್ಕೆ 1 ರು, ಕೆಳದರ್ಜೆ ಪ್ರಯಾಣಕ್ಕೆ 8 ಆಣೆ ನಿಗಧಿಪಡಿಸಲಾಗಿತ್ತು. 24 ಗಂಟೆಯ ಕ್ಲಾಕ್ ರೂಮಿಗೆ 2 ಆಣೆ ನಿಗಧಿಪಡಿಸಿ, ನಂದಿಯಲ್ಲಿ ಕ್ಲಾಕ್ ರೂಮನ್ನು ಸಿದ್ಧಪಡಿಸಲಾಯಿತು. 1970ರಲ್ಲಿ ರದ್ದಾದ ರೇಲು ಮಾರ್ಗ ಸತತ ಹೋರಾಟದ ನಂತರ 1978-79ರಲ್ಲಿ ಡೀಸೆಲ್ ಎಂಜಿನ್ ರೇಲ್ವೆ ಚೇರ್ ಪ್ರಾರಂಭಿಸಲಾಯಿತಾದರೂ ಸತತ ನಷ್ಟದ ಕಾರಣ ಸಂಚಾರವನ್ನು ನಿಲ್ಲಿಸಿ ರೇಲ್ವೆ ಹಳಿಗಳನ್ನು ತೆಗೆಯುವ ಕಾರ್ಯಕ್ಕೆ ಮುಂದಾದಾಗ ಜಿಲ್ಲೆಯ ಜನತೆಯನ್ನು ರೇಲ್ವೆ ಇಲಾಖೆಯ ನೌಕರರಾಗಿದ್ದ ಪತ್ರಕರ್ತ ಮಲ್ಲೇಶ್ರವರ ತಂದೆ ನಡುಪಳ್ಳಿ ಮುನಿಶಾಮಿರವರು ಎಚ್ಚರಗೊಳಿಸಿ ಇಡೀ ಜಿಲ್ಲೆಯಾದ್ಯಂತ ಜನರನ್ನು ಸಂಘಟಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಚಳವಳಿಯನ್ನು ತೀವ್ರಗೊಳಿಸಲಾಯಿತು.
2001ರ ಮಾರ್ಚ್ 1ರಂದು ಶಿಡ್ಲಘಟ್ಟ ತಾಲೂಕು ಕನ್ನಡ ಕ್ರಿಯಾಸಮಿತಿ ಅಧ್ಯಕ್ಷ ಬ.ನಾ. ಪಿಳ್ಳಯ್ಯ ನೇತೃತ್ವದಲ್ಲಿ ಚಳವಳಿಯನ್ನು ತೀವ್ರಗೊಳಿಸಿ ಬಂಗಾರಪೇಟೆ ಮತ್ತು ಗೌರೀಬಿದನೊರಿನಲ್ಲಿ ನವದೆಹಲಿಗೆ ಹೊರಟ್ಟಿದ್ದ ರಾಜದಾನಿ ಎಕ್ಸ್ಪ್ರೆಸ್ ಮತ್ತು ಕೆ.ಕೆ. ಎಕ್ಸ್ಪ್ರೆಸ್ ರೈಲುಗಳನ್ನು 3 ಗಂಟೆಗಳ ಕಾಲ ತಡೆಹಿಡಿದು ಚಳವಳಿಕಾರರನ್ನು ಜೈಲಿಗಟ್ಟಲಾಯಿತು.
2ನೇ ಬಾರಿಗೆ ಮತ್ತೆ ನವದೆಹಲಿಗೆ ಬ.ನಾ. ಪಿಳ್ಳಯ್ಯ ನೇತೃತ್ವದಲ್ಲಿ ಖಂಡೇರಾವ್, ರೂಪಸಿ ರಮೇಶ್, ಎಸ್.ವಿ. ಅಯ್ಯರ್, ತೊ.ಕೆಂ. ನಾಗರಾಜ್ ಮುಂತಾದ ಸಮಾರು 20 ಮಂದಿಯ ತಂಡ ಪ್ರಧಾನ ಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸಿ ಬಂಧನಕ್ಕೆ ಒಳಗಾದರು, ಹೀಗೆ ಪ್ರಾರಂಭವಾದ ಚಳವಳಿಗೆ ಕೋಲಾರ ಲೋಕಸಭಾ ಸದಸ್ಯ ಕೆ.ಎಚ್. ಮುನಿಯಪ್ಪ ರೇಲ್ವೆ ಸಚಿವರಾದ ನಂತರ ಅಂತಿಮ ರೂಪ ನೀಡಿ ರೇಲ್ವೆ ವಿಸ್ತರಣಾ ಕಾರ್ಯಕ್ಕೆ ಬೇಕಾದ ಹಣವನ್ನು ಬಜೆಟ್ನಲ್ಲಿ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಿ ಇದೀಗ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಸಂಚಾರ ಉದ್ಘಾಟಿಸಲು ಸಿದ್ಧತೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement