ಟೇಕಲ್ ಗ್ರಾಮ ಸಭೆಯಲ್ಲಿ ವಾಗ್ವಾದ
ಟೇಕಲ್: ಭಾರಿ ಗದ್ದಲಗಳ ನಡುವೆ 4 ಇಲಾಖಾಧಿಕಾರಿಗಳ ಹಾಜರಿಯಲ್ಲಿ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಗ್ರಾಪಂ ಮಧ್ಯೆ ವಾದವಿವಾದಗಳಲ್ಲಿ ಟೇಕಲ್ನ ಕೆ.ಜಿ.ಹಳ್ಳಿ ಗ್ರಾಪಂ ಗ್ರಾಮಸಭೆ ನಡೆಯಿತು.
ಕೆ.ಜಿ.ಹಳ್ಳಿ ಗ್ರಾಪಂ ಗ್ರಾಮ ಸಭೆ 11 ಗಂಟೆಗೆ ನಡೆಯಬೇಕಿದ್ದು ಜನರು ಬಾರದ ಕಾರಣ ಸುಮಾರು ಒಂದೂವರೆ ಗಂಟೆ ತಡವಾಗಿ ಪ್ರಾರಂಭಗೊಂಡಿತು. ಸ್ಥಳೀಯ ಪತ್ರಕರ್ತರೊಬ್ಬರ ಮನೆ ಮುಂದಿನ ಚರಂಡಿ ಸ್ವಚ್ಛತೆಯಿಲ್ಲದ ಬಗ್ಗೆ ಪಂಚಾಯ್ತಿಗೆ ಕಳೆದ ಒಂದು ವರ್ಷದಿಂದ ಮನವಿ ಮಾಡಿದರು ಗಮನಹರಿಸದ ಗ್ರಾಪಂ ಹಾಗೂ ಅಧಿಕಾರಿಗಳ ಬಗ್ಗೆ ಪತ್ರಕರ್ತ ಟೇಕಲ್ ಲಕ್ಷ್ಮೀಶ್ ಸಭೆಯಲ್ಲಿ ವಿಷಯವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೋವಿಂದೆಗೌಡ, ಲಕ್ಷ್ಮೀಶ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಡುವೆ ವಾಗ್ವಾದ ನಡೆಯಿತು. ಕೊನೆಗೂ ಅಧಿಕಾರಿಗಳು ಉಡಾಫೆ ಉತ್ತರ ನೀಡಿದರು. ಗ್ರಾಪಂ ಸದಸ್ಯ ರಮೇಶ್ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕೆಂದು ಒತ್ತಾಯಿಸಿದರು.
ಟೇಕಲ್ ಆಸ್ಪತ್ರೆಯಲ್ಲಿ ರಾತ್ರಿ ಪಹಳೆಯಲ್ಲಿರುವ ನರ್ಸ್ಗಳಿಗೆ ವೈದ್ಯರು ಔಷಧ ನೀಡುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿದರು. ಗ್ರಾಪಂ ಕಾರ್ಯದರ್ಶಿ ಗೋಪಾಲ್ ವಾರ್ಡ್ ಸಭೆಗಳಲ್ಲಿ ಆದ ಎಂಜಿಎನ್ಆರ್ ಇಜಿಎ ಯೋಜನೆಯ ಕೆಲಸಗಳನ್ನು ಸಭೆಯಲ್ಲಿ ಮಂಡಿಸಿದರು. ಅಧ್ಯಕ್ಷೆ ಲಕ್ಷ್ಮಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೆಂಕಟಶಿವಾರೆಡ್ಡಿ ಸಭೆಯ ಮಹತ್ವ ತಿಳಿಸಿದರು. ಪಿಡಿಒ ಎಸ್.ಎಚ್. ಗೋವಿಂದೆಗೌಡ, ಅಲುಮೇಲುಮಂಗಮ್ಮ, ಸದಸ್ಯರು ಹಾಜರಿದ್ದರು.