ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾತೃಭಾಷೆಗೆ ಹೆಚ್ಚು ಒತ್ತು ನೀಡಿ: ದಿನೇಶ್ ಗುಂಡೂರಾವ್

Rashmi Kasaragodu
Updated On : 2 Nov 2013, 12:46 pm

ಚಿಕ್ಕಬಳ್ಳಾಪುರ: ಎಲ್ಲಾ ಭಾಷೆಗಳ ಜ್ಞಾನವನ್ನು ಹೊಂದಿದ್ದರೂ ನಾಡಿನ ಪ್ರತಿಯೊಬ್ಬರು ಮಾತೃಭಾಷೆಗೆ ಹೆಚ್ಚು ಒತ್ತು ಕೊಟ್ಟು ಕನ್ನಡದಲ್ಲಿ ಮಾತನಾಡುವುದೇ ಕನ್ನಡ ನಾಡಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಪಂ ವತಿಯಿಂದ ನಗರದ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 58ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಕನ್ನಡಿಗರು ಸಹೃದಯವಂತರು, ಎಲ್ಲಾ ಜನರನ್ನು ಉತ್ತಮ ಬಾಂಧವ್ಯ ಮನೋಭಾವನೆಯಲ್ಲಿ ತಮ್ಮೊಳಗೆ ಬೆರೆಸಿಕೊಂಡು ಜೀವನ ಸಾಗಿಸುತ್ತಾರೆ. ಇದರಿಂದ ಅನೇಕ ಕಡೆಯಿಂದ ಹಲವರು ಹೆಚ್ಚಿಗೆ ಬಂದು ನಮ್ಮ ನಾಡಿನಲ್ಲಿ ಬೆರೆತು ಹೋಗುತ್ತಿದ್ದಾರೆ. ಆದರೆ, ಇದು ಮಾತೃಭಾಷೆಯ ಮೇಲೆ ಅಹಿತಕರ ಪ್ರಭಾವವನ್ನು ಬೀರುತ್ತಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ನಾಡು ಇಡೀ ವಿಶ್ವದಾದ್ಯಂತ ಹೆಸರು ಮಾಡಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಬೇರೆ ದೇಶದ ಜನರು ನಾಡಿನ ಬಗ್ಗೆ ಒಲವು ತೋರುತ್ತಿದ್ದಾರೆ. ಆದರೆ, ಇಲ್ಲಿ ನೆಲೆಸಿರುವಂತಹ ಹಲವರು ಆಂಗ್ಲ ವ್ಯಾಮೋಹಕ್ಕೆ ತುತ್ತಾಗಿ ಮಾತೃಭಾಷೆಯನ್ನು ತಾತ್ಸಾರದಿಂದ ನೋಡುವುದು ಸರಿಯಲ್ಲ. ನಾವು ಎಲ್ಲಾ ಭಾಷೆಗಳನ್ನೂ ಕಲಿತುಕೊಳ್ಳಬೇಕು. ಆದರೆ, ಎಲ್ಲಾ ಕಡೆ ಮಾತೃಭಾಷೆಯಲ್ಲಿಯೇ ವ್ಯವಹರಿಸುವ ಮೂಲಕ ಕನ್ನಡತನವನ್ನು ಉಳಿಸಬೇಕೆಂದರು.
ಸರ್ಕಾರ ಬದ್ಧ: ಕನ್ನಡ ನಾಡು ನುಡಿ ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ರಾಜ್ಯದಲ್ಲಿ ಆಡಳಿತ ಕನ್ನಡ ಭಾಷೆಯಲ್ಲಿಯೇ ನಡೆಯುವಂತಾಗಲು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚದೇ ಮೂಲ ಸೌಕರ್ಯಗಳನ್ನು ಒದಗಿಸಿ ಮಾತೃಭಾಷೆಯಲ್ಲಿ ವ್ಯಾಸಂಗ ಮಾಡುವುದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸಮಿತಿ ರಚಿಸಿದ್ದು ಸರೋಜಿನಿ ಮಹಿಷಿ ವರದಿಯನ್ನು ತಿದ್ದುಪಡಿ ಮಾಡಿ ಅದನ್ನು ಜಾರಿ ಮಾಡುವ ಸಲುವಾಗಿ ತಜ್ಞರ ಸಮಿತಿ ರಚಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಅಲ್ಲದೇ ಡಾ.ಚಿದಾಂನಂದ ಮೂರ್ತಿ ಸಮಿತಿಯ ಶಿಫಾರಸ್ಸಿನಂತೆ ಯೂನಿಕೋಡ್ - ಕನ್ನಡ ತಂತ್ರಾಂಶವನ್ನು ಶೀಘ್ರವೇ ಲೋಕಾರ್ಪಣೆಗೊಳಿಸಲು ಸರ್ಕಾರ ಸಿದ್ಧವಾಗಿದೆ ಎಂದ ಅವರು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದು ಇದು ಪರಿಪೂರ್ಣವಾಗಲು ನೆರವನ್ನು ಒದಗಿಸಬೇಕಾಗಿದೆ. ಇದರ ಸಲುವಾಗಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಜಿಲ್ಲೆಯ ಅಭಿವೃದ್ಧಿ: ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಚಿಕ್ಕಬಳ್ಳಾಪುರ ನಗರದ ಕುಡಿಯುವ ನೀರಿನ  ಪೂರೈಕೆಗೆ 11 ಕೋಟಿ ಟೆಂಡರ್ ಅನುಮೋದನೆಯಾಗಿದೆ. ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 2,48,990 ಜನರು, ಕ್ಷೀರ ಭಾಗ್ಯ ಯೋಜನೆಯಡಿ 2,04,942 ಶಾಲಾ ಮಕ್ಕಳು ಹಾಗೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ 93,815 ಮಂದಿ ಫಲಾನುಭವಿಗಳು ಸವಲತ್ತುಗಳನ್ನು ಪಡೆದುಕೊಂಡಿದ್ದು ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 234 ರ ಮೇಲ್ದರ್ಜೆಗೆ ಅನುಮೋದನೆ ನೀಡಲಾಗಿದೆ.ನಾಡಿನ ಹಿರಿಯ ಗಾಂಧೀವಾದಿ, ಶಿಕ್ಷಣತಜ್ಞ ಪದ್ಮ ಶ್ರೀ ಡಾ.ಎಚ್. ನರಸಿಂಹಯ್ಯರವರ ಸ್ಮಾರಕ ಭವನದ ನಿರ್ಮಾಣವು 2 ಕೋಟಿ ಅನುದಾನದಲ್ಲಿ ನಡೆಯುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.
ನಂದಿ ಹೋಬಳಿಯ ಅರ್ಚಕ, ನಾರುಬೇರು ಕಲಾವಿದ ನಾಗರಾಜ್, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಹಾಗೂ ಕಲಾವಿದ ನಾಗಸುಬ್ರಮಣ್ಯರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಚಿನ್ನಪ್ಪ, ಶಾಸಕ ಡಾ.ಕೆ. ಸುಧಾಕರ್, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಿವಪ್ರಸಾದ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಉಪಸ್ಥಿತರಿದ್ದರು. ಇದಕ್ಕೂ ಮುನ್ನಾ ರಾಜ್ಯೋತ್ಸವದ ಪ್ರಯುಕ್ತ ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ನಾನಾ ರೀತಿಯ ಕಲಾ ತಂಡಗಳೊಂದಿಗೆ ಕನ್ನಡ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಸರ್.ಎಂ.ವಿ. ಕ್ರೀಡಾಂಗಣದವರೆಗೂ ಸಾಗಿ ಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement