ದೀಪಾವಳಿ; ಬಡವರಿಗೆ ಪಡಿತರ
ಕನ್ನಡಪ್ರಭ ವಾರ್ತೆ ಕೋಲಾರ ನ.3
ದೀಪಾವಳಿ ಅಂಗವಾಗಿ ಪ್ರತಿವರ್ಷದಂತೆ ಈವರ್ಷವೂ ಬಡ ಕುಟುಂಬಗಳಿಗೆ ನಗರಸಭಾ ಮಾಜಿ ಸದಸ್ಯ ಮುಕ್ಕಡ್ ವೆಂಕಟೇಶ್ ಅಕ್ಕಿ, ಬೆಲ್ಲ, ಅಡುಗೆ ಎಣ್ಣೆ, ಸ್ಟೀಲ್ ಬಿಂದಿಗೆಗಳನ್ನು ವಿತರಿಸಿದರು. ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರದ ಕಮಲಾ ಮಹಡಿ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮಹಿಳೆಯರು, ವೃದ್ಧರು, ಅಂಗವಿಕಲರು ಸೇರಿದ್ದು, ಯಾವುದೇ ರಾಜಕೀಯ ಹಿತಾಸಕ್ತಿಯಿಲ್ಲದೇ ನಿರಂತರವಾಗಿ ಹಬ್ಬಗಳಿಗೆ ಜನತೆಗೆ ಸಹಾಯ ಮಾಡುತ್ತಾ ಬಂದಿರುವ ವೆಂಕಟೇಶ್ ಕುಟುಂಬದ ಕಾರ್ಯ ನಡೆಸುತ್ತಿದ್ದಾರೆಂದು ಸಚಿವ ಮುನಿಯಪ್ಪ ಶ್ಲಾಘಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಹಿಂದುಳಿದ ವರ್ಗಗಳ ಮುಖಂಡರೊಬ್ಬರು ಇಷ್ಟೊಂದು ಸಂಖ್ಯೆಯಲ್ಲಿ ಬಡವರಿಗೆ ನೆರವಾಗುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಸಮಾಜ ಸೇವಕ ದಾನಿ ಮುಕ್ಕಡ್ ವೆಂಕಟೇಶ್ ಮಾತನಾಡಿ, ನಾನು ಈಗ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದು, ಕಳೆದ ವರ್ಷ ಕೋಹಿನೂರು ವಜ್ರ ಎಂದು ಓರ್ವ ಜನಪ್ರತಿನಿಧಿಯನ್ನು ನಂಬಿದ್ದೆ. ಆದರೆ ಅದು ಗಾಜಿನ ಚೂರು ಎಂದು ಅರಿವಾಯಿತು ಎಂದು ಶಾಸಕ ವರ್ತೂರ್ ಪ್ರಕಾಶ್ ಹೆಸರು ಹೇಳದೆ ತಿಳಿಸಿ, ಈ ಬಾರಿ ನನ್ನ ದಾನ ಕಾರ್ಯಕ್ಕೆ ಸಹಕರಿಸಿದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಜನತೆ ಬೆಂಬಲಿಸಬೇಕೆಂದರು. ನಾನು ಬಡ ಕುಟುಂಬದಿಂದ ಬಂದವನಾಗಿದ್ದು, ನನ್ನ ತಾಯಿ ಹಬ್ಬ ಆಚರಣೆಗೆ ಅನುಭವಿಸುತ್ತಿದ್ದ ಮಾನಸಿಕ ವೇದನೆಯನ್ನು ಕಣ್ಣಾರೆ ಕಂಡಿದ್ದೇನೆ, ನೋವು ಅನುಭವಿಸಿದ್ದೇನೆ. ಹಾಗಾಗಿ ಬಡವರ ಸೇವೆ ಮಾಡುತ್ತಿರುವುದಾಗಿ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್, ಬಡವರಿಗೆ ದಾನ ನೀಡುವ ಗುಣ ವೆಂಕಟೇಶ್ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆ, ಇದೇ ಹಾದಿಯಲ್ಲಿ ರಾಜಕಾರಣಿಗಳು ಸಹ ಸಾಗುವ ಅಗತ್ಯವಿದೆ ಎಂದು ತಿಳಿಸಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ಡಿಸಿಸಿ ಅಧ್ಯಕ್ಷ ಅನಿಲ್ಕುಮಾರ್, ರೇಷ್ಮೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ, ಮುಖಂಡರಾದ ಮುನಿನಾರಾಯಣಗೌಡ, ಗೋವಿಂದಪ್ಪ,ಕುಮಾರ್, ಜಯದೇವ್, ಸ್ವಾಮಿ, ವೆಂಕಟೇಶ್ ಅವರ ಕುಟುಂಬದ ಸದಸ್ಯರಾದ ವಿ.ಹರಿಕೃಷ್ಣ, ಮುರಳಿಕೃಷ್ಣ, ಸುದರ್ಶನ್ ಕೃಷ್ಣ, ಕಿಶೋರ್ ಮತ್ತಿತರರು ಹಾಜರಿದ್ದು ಬಡವರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.