ಯುವಜನೋತ್ಸವಕ್ಕೆ ಅದ್ಧೂರಿ ತೆರೆ
ಕ.ಪ್ರ.ವಾರ್ತೆ ಕೋಲಾರ ನ. 3
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೋಲಾರ ತೋಟಗಾರಿಕೆ ಮಹಾವಿದ್ಯಾಲಯದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಯುವಜನೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ ಯುವ ಜನೋತ್ಸವದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಕೋಲಾರ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಪ್ರಶಸ್ತಿ ನೀಡಿದರು. ರನ್ನರ್ಸ್ ಆದ ಬೀದರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಓದು ಪರೀಕ್ಷೆಗೆ ಸೀಮಿತವಾಗದೇ ಬದುಕಲು ಸಹಕಾರಿಯಾಗಬೇಕೆಂಬುದನ್ನು ಮನಗಂಡು ಪದವಿ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆತ್ಮವಿಶ್ವಾಸದಿಂದ ಸಿದ್ಧರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಂತರ ಕಾಲೇಜುಗಳ ಯುವ ಜನೋತ್ಸವ ಕಾರ್ಯಕ್ರಮಗಳು ನಡೆಸುವುದು ವಿದ್ಯಾರ್ಥಿಗಳಲ್ಲಿ ವಿಶ್ವಮಾನವ ಸಂದೇಶ ಸಾರಲು ಎಂದ ಜಿಲ್ಲಾಧಿಕಾರಿಗಳು ನೀವು ಪದವಿ ಪಡೆಯುವುದರೊಂದಿಗೆ ಹೊರ ರಾಜ್ಯಗಳಲ್ಲಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿ ಅಲ್ಲಿಗೆ ಹೋಗಿ ಬಂದರೆ ನಿಮಗೆ ವಿವಿಧ ಭಾಷೆ, ಸಂಸ್ಕೃತಿಗಳ ಅರಿವಾಗುತ್ತದೆ ಎಂದು ಕಿವಿಮಾತು ಹೇಳಿದರು. ನಿಮ್ಮ ಪ್ರಯಾಣ ಕೇವಲ ಪದವಿ ಪಡೆಯಲು, ಉದ್ಯೋಗ ಪಡೆಯಲು ಸೀಮಿತವಾಗದಿರಲಿ ಸಮಾಜಕ್ಕೆ ಏನನ್ನಾದರೂ ನೀಡುವ ಹೃದಯವಂತಿಕೆಯಿಂದಿರಲಿ ಎಂದು ತಿಳಿಸಿದರು.
ನಾನೂ ಕೃಷಿ ಪದವಿ ಪಡೆದವನೇ ಆದರೆ ನಂತರ ನನ್ನ ಪ್ರಯಾಣ ಕೇಂದ್ರ ಲೋಕಸೇವಾ ಆಯೋಗದೆಡೆಗೆ ಮುಂದುವರೆಸಿದೆ, ಹಾಗೆಯೇ ನೀವು ಈ ಸಾಧನೆ ಮಾಡಿ, ಇದರಿಂದ ಕಾನೂನಿನಡಿ ಸಾವಿರಾರು ಜನರ ನೋವಿಗೆ ಸ್ಪಂದಿಸುವ ಶಕ್ತಿ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ತೋಟಗಾರಿಕಾ ವಿವಿಯ ಶಿಕ್ಷಣ ನಿರ್ದೇಶಕ ಡಾ. ಬಿ. ರಾಜು, ಕೃಷಿ, ತೋಟಗಾರಿಕಾ ಪದವಿಗಳು ಇಂದು ಅಗತ್ಯವಾಗಿದ್ದು, ವೈಜ್ಞಾನಿಕ ಪದ್ಧತಿಗಳ ಬೇಸಾಯ ಮಾತ್ರ ಈ ಜನಸಂಖ್ಯೆಗೆ ಅನ್ನ ನೀಡಲು ಸಾಧ್ಯವಾಗಿದ್ದು, ಉತ್ತಮ ಮೌಲ್ಯಗಳೊಂದಿಗೆ ಶಿಕ್ಷಣ ಪಡೆಯಿರಿ ಎಂದರು.
ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಬಾಗಲಕೋಟೆ ತೋಟಗಾರಿಕೆ ವಿವಿ ಕುಲ ಸಚಿವ ಮಾಡಲಗೇರಿ, ಡೀನ್ ಡಾ.ಎಂ.ಬಿ. ಗುಳೇದ್, ಶಿರಸಿ ತೋಟಗಾರಿಕೆ ಕಾಲೇಜಿನ ಡೀನ್ ಡಾ. ಎನ್. ಬಸವರಾಜು, ಬೀದರ್ ಮಹಾವಿದ್ಯಾಲಯದ ಡೀನ್ ಡಾ.ಸಿ.ಎನ್. ಹಂಚಿಮನಿ, ಗುರುಪ್ರಸಾದ್, ಡಾ.ವೆಂಕಟೇಶ್, ಕೋಲಾರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ವಿ. ನಾಚೇಗೌಡ ಇದ್ದರು.