'ರಾಜ್ಯೋತ್ಸವ ಮಕ್ಕಳು- ಅಧಿಕಾರಿಗಳಿಗೆ ಮಾತ್ರ ಸೀಮಿತವಲ್ಲ'
ಬಾಗೇಪಲ್ಲಿ: ಕನ್ನಡ ರಾಜ್ಯೋತ್ಸವ ಕೇವಲ ಶಾಲಾ ಮಕ್ಕಳಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಸೀಮಿತವಾಗದೇ ಈ ನಾಡಿನ ಪ್ರತಿಯೊಬ್ಬ ಕನ್ನಡಿಗರೂ ಸಹ ವಿಜೃಂಭಣೆಯಿಂದ ಆಚರಣೆ ಮಾಡುವಂತಾಗಬೇಕೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಸಂಕೀರ್ಣ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 58 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡವನ್ನು ಉಳಿಸಿ, ಬೆಳೆಸುವ ಕೆಲಸ ಕೇವಲ ನವೆಂಬರ್ಗೆ ಸೀಮಿತವಾಗದೇ ವರ್ಷದ 365 ದಿನಗಳೂ ಕನ್ನಡ ಭಾಷೆಯ ಬಗ್ಗೆ ಸರ್ಕಾರ ಸೇರಿದಂತೆ ಸಾರ್ವಜನಿಕರು ಸಹ ಆಸಕ್ತಿ ತೋರಿದಾಗ ಮಾತ್ರ ಕನ್ನಡವನ್ನು ಬೆಳೆಸಲು ಸಾಧ್ಯ ಎಂದರು.
ಆಂಧ್ರಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಈ ಕ್ಷೇತ್ರವು ನಮ್ಮ ರಾಜ್ಯಕ್ಕೆ ಸೇರಿದ್ದರೂ ಸಹ ಇಲ್ಲಿನ ಬಹುತೇಕರ ಆಡುಭಾಷೆ ತೆಲುಗು. ಇಲ್ಲಿ ಕನ್ನಡಕ್ಕಿಂತ ತೆಲುಗು ಭಾಷೆಯ ಪ್ರಭಾವವೇ ಹೆಚ್ಚಾಗಿದೆ. ಆದರೂ ಸಹ ಕನ್ನಡ ನಾಡಿನ ಜಲ, ನೆಲಗಳಂತಹ ಜ್ವಲಂತ ಸಮಸ್ಯೆಗಳು ಎದುರಾದಾಗ ಕನ್ನಡ ಪರ ಸಂಘಟನೆಗಳು ಸೇರಿದಂತೆ ಈ ಭಾಗದ ಜನರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಒಂದಾಗಿ ಒಗ್ಗಟಿನಿಂದ ಹೋರಾಟಕ್ಕೆ ಮುಂದಾಗುತ್ತಾರೆ. ಕನ್ನಡಪರ ಸಂಘಟನೆಗಳು ಕನ್ನಡಕ್ಕಾಗಿ ಬಹುತೇಕ ಹೋರಾಟಗಳನ್ನು ಮಾಡಿ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಆದರೆ ಇತ್ತೀಚೆಗೆ ಕೆಲವು ಕನ್ನಡಪರ ಸಂಘಟನೆಗಳು ಒಣ ಪ್ರತಿಷ್ಠೆಗೆ ಬಲಿಯಾಗಿ ಅನೇಕ ಹೋಳುಗಳಾಗಿ ವಿಂಗಡನೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ವರ್ಷದ ಒಂದು ತಿಂಗಳಲ್ಲಿ ಮಾತ್ರ ಕನ್ನಡದ ಅಭಿವೃದ್ಧಿಗಾಗಿ ಹೋರಾಟವನ್ನು ಮಾಡುವ ಪ್ರವೃತ್ತಿಯನ್ನು ಕೈಬಿಟ್ಟು ಎಲ್ಲಾ ಸಂಘಟನೆಗಳು ಒಂದುಗೂಡಿ ಜನರಲ್ಲಿ ನಮ್ಮ ನಾಡಿನ ಭಾಷೆ, ನೆಲ ಮತ್ತು ಜಲದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ಮಾಡಿದಾಗ ಮಾತ್ರ ಕನ್ನಡದ ಅಭಿವೃದ್ಧಿಪಡಿಸಲು ಸಾಧ್ಯ ಎಂದರು.
ಇದಕ್ಕೂ ಮುನ್ನ ಪಟ್ಟಣದ ಚಿತ್ರಾವತಿ ನದಿ ಮುಂಭಾಗದಿಂದ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಸಲಾಯಿತು. ಕನ್ನಡವನ್ನು ಸಾರುವ ಅನೇಕ ಮಹನೀಯರ ಸ್ತಬ್ಧ ಚಿತ್ರಗಳನ್ನು ಹೊತ್ತ ವಾಹನಗಳು ಆಕರ್ಷನೀಯವಾಗಿದ್ದವು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಎ. ಪದ್ಮ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ವೆಂಕಟೇಶ್, ಆರಕ್ಷಕ ವೃತ್ತ ನಿರೀಕ್ಷಕ ವಸಂತ್, ಜಿ.ಪಂ. ಸದಸ್ಯರಾದ ಸಾವಿತ್ರಮ್ಮ, ನಾರಾಯಣಮ್ಮ, ಅಮರಾವತಿ, ತಾ.ಪಂ. ಅಧ್ಯಕ್ಷೆ ಮುನಿರತ್ನಮ್ಮ,ಪುರಸಭೆಯ ಸದಸ್ಯರಾದ ನಲ್ಲಪ್ಪ, ಆ.ನಾ. ಮೂರ್ತಿ ಮುಂತಾದವರು ಭಾಗವಹಿಸಿದ್ದರು.