ಆಂಧ್ರ ಬಸ್ ದುರಂತ; ಬಂಗಾರಪೇಟೆ ಯುವಕ ಸಾವಿನ ಶಂಕೆ?
ಬಂಗಾರಪೇಟೆ: ಕಳೆದವಾರ ಆಂಧ್ರಪ್ರದೇಶದ ಮೆಹಬೂಬ್ನಗರದಲ್ಲಿ ನಡೆದ ಬಸ್ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಪಟ್ಟಣದ ಯುವಕನೊಬ್ಬ ಸೇರಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಪಟ್ಟಣದ ಸಿ.ರಹೀಂ ಬಡಾವಣೆಯ ಚಾಂದ್ಪಾಷ ಎಂಬುವರ ಮಗ ಮೋಸಿಂ (25) ದುರಂತ ಸಂಭವಿಸಿದ ದಿನದಿಂದ ನಾಪತ್ತೆಯಾಗಿರುವುದು ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಮೋಸಿಂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಬೆಂಕಿಗೆ ಆಹುತಿಯಾದ ಜಬ್ಬಾರ್ ಟ್ರಾವಲ್ಸ್ನಲ್ಲೇ ಕೆಲಸದ ಮೇಲೆ ಹೈದರಾಬಾದ್ಗೆ ಹೋಗಲು ಟಿಕೆಟ್ ಕಾಯ್ದಿರಿಸಿದ್ದು ಖಾತರಿಯಾಗಿದೆ. ದುರಂತದಲ್ಲಿ ಶವಗಳು ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದು ಡಿಎನ್ಎ ಪರೀಕ್ಷೆಗೆ ರಕ್ತ ಪಡೆಯಲಾಗಿದ್ದು ಅದರ ಫಲಿತಾಂಶ ಬಂದ ನಂತರವಷ್ಟೆ ಸತ್ಯಾಂಶ ಬೆಳಕಿಗೆ ಬರಲಿದೆ.