ಕೀಟನಾಶಕ ಸೇವನೆ: 17 ಕುರಿಮರಿ ಸಾವು
ಚಿಂಚೋಳಿ: ತಾಲೂಕಿನ ಐನೋಳಿ ಗ್ರಾಮದಲ್ಲಿ ತೊಗರಿ ಬೆಳೆಗೆ ಸಿಂಪಡಿಸುವ ಕೀಟನಾಶಕ ಸೇವಿಸಿ ಸ್ಥಳದಲ್ಲಿಯೇ 17 ಕುರಿ ಮರಿಗಳು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಐನೋಳಿ ಗ್ರಾಮದ ಮಲ್ಲಪ್ಪ ತಂದೆ ಪೀರಪ್ಪ ಆರೇರದೊಡ್ಡಿ ಎಂಬಾತನಿಗೆ ಸೇರಿದ ಕುರಿ ಮರಿಗಳನ್ನು ಮನೆಯಲ್ಲಿರುವ ಬಿದಿರಿನ ಗುಮ್ಮಿಯಲ್ಲಿ ಕೂಡಿ ಹಾಕಿ ಕುರಿಗಳನ್ನು ಮೇಯಿಸಲಿಕ್ಕೆ ಹೋಗಿದ್ದಾರೆ. ಸಂಜೆ ವೇಳೆಯಲ್ಲಿ ಕುರಿ ಮರಿಗಳನ್ನು ಮೇಕೆಗಳ ಹಾಲು ಕುಡಿಸಲು ಗುಮ್ಮಿಯನ್ನು ತೆರೆದಾಗ 17 ಕುರಿ ಮರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಸ್ಥಳೀಯ ಪಶು ವೈದ್ಯಾಧಿಕಾರಿ ಡಾ. ಧನರಾಜ ಬೊಮ್ಮ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಎಲ್ಲ ಕುರಿ ಮರಿಗಳು ಕೀಟನಾಶಕ ಸೇವಿಸಿ ಮೃತಪಟ್ಟಿವೆ ಎಂದು ತಿಳಿಸಿದ್ದಾರೆ. ಚಿಂಚೋಳಿ ಪಿಎಸ್ಐ ಶಿವಶಂಕರ ಸಾಹು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಕುರಿ ಮರಿಗಳನ್ನು ಉದ್ದೇಶಪೂರ್ವಕವಾಗಿ ಕೀಟನಾಶಕ ಕುಡಿಸಿದ್ದಾರೆಂದು ಮಲ್ಲಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.