ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ನೀರಿಗೆ ಬರ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ನ. 4
ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೂ ಬಡಜನರನ್ನು ಪೀಡಿಸುವ ಸಮಸ್ಯೆಗಳಿಗೂ ಬಿಡಿಸಲಾಗದ ನಂಟು.
ಸಿಬ್ಬಂದಿ, ಔಷಧಿ, ಹಾಸಿಗೆ, ಸ್ವಚ್ಛತೆ ಕೊರತೆಗಳ ಜತೆಗೆ ಹತ್ತು-ಹಲವಾರು ಸಮಸ್ಯೆಗಳು ಇಲ್ಲಿ ಮನೆ ಮಾಡಿವೆ. ಇದೀಗ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ರೋಗಿಗಳನ್ನು ಬಾಧಿಸುತ್ತಿದೆ.
ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯು ಅಭಿವೃದ್ಧಿಯ ಭರವಸೆಗಳಲ್ಲಿ ಮುಂದೆ ಇಲ್ಲಿಗೆ ಆಗಮಿಸುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಯಾವುದೇ ಸಮಸ್ಯೆಯಿಲ್ಲದೇ ಸೂಕ್ತ ರೀತಿಯಲ್ಲಿ ಸೇವೆ ನೀಡುವಲ್ಲಿ ಮಾತ್ರ ಹಿಂದಿದೆ.ಇದು ಜಿಲ್ಲಾ ಕೇಂದ್ರದಲ್ಲಿರುವುದರಿಂದ ಜಿಲ್ಲೆಯ ಇತರೆ ತಾಲೂಕುಗಳಿಂದ ಮಾತ್ರವಲ್ಲದೇ ಸಮೀಪದ ವಿಜಯಪುರ,ದೊಡ್ಡಬಳ್ಳಾಪುರ ತಾಲೂಕು ಸೇರಿದಂತೆ ಹಲವೆಡೆಯಿಂದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ರೋಗಿಗಳು ಬರುತ್ತಾರೆ. ಸಾವಿರಾರು ಮಂದಿ ಬಂದು ಹೊರ ರೋಗಿಗಳು ಮತ್ತು ಒಳ ರೋಗಿಗಳಾಗಿ ಸೇವೆಯನ್ನು ಪಡೆದುಕೊಳ್ಳುತ್ತಿದ್ದು, ಆಸ್ಪತ್ರೆ ಸದಾ ರೋಗಿಗಳಿಂದ ತುಂಬಿ ತುಳುಕಾಡುತ್ತಿರುತ್ತದೆ. ಇಷ್ಟಾದರೂ ಸಹ ಸಂಬಂಧಪಟ್ಟವರಿಂದ ರೋಗಿಗಳಿಗೆ ಅನುಗುಣವಾಗಿ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಬರುತ್ತಿರುವ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಮಾತ್ರವಲ್ಲ, ದಾನಿಗಳು ರೋಗಿಗಳ ಅನುಕೂಲಕ್ಕಾಗಿ ನೀಡಿದ ಉಪಕರಣಗಳನ್ನು ಸಹ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ.
ಧೂಳು ತಿನ್ನುವ ಫಿಲ್ಟರ್: ನೀರನ್ನು ಪೋಲು ಮಾಡಬೇಡಿ, ಶುದ್ಧ ನೀರನ್ನು ಮಾತ್ರ ಕುಡಿಯಿರಿ, ಆರೋಗ್ಯ ಕಾಪಾಡಿಕೊಳ್ಳಿ ಎಂಬ ಸಂದೇಶದ ಜತೆಗೆ ನೀರು ಶುದ್ದೀಕರಣ ಉಪಕರಣಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರಾರಾಜಿಸುತ್ತವೆ. ಆದರೆ, ಅವುಗಳಿಂದ ನೀರೇ ಬರುವುದಿಲ್ಲ, ಇನ್ನೆಲ್ಲಿ ಶುದ್ಧವಾದ ಕುಡಿಯುವ ನೀರಿನ ಮಾತು.
ಈ ಹಿಂದೆ ಆಸ್ಪತ್ರೆಗೆ ಲೋಕಾಯುಕ್ತರು, ಸಚಿವರು, ಜಿಲ್ಲಾಧಿಕಾರಿ, ಶಾಸಕರು ಬಂದು ಇವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ರಿಪೇರಿ ಮಾಡಿಸಿದ್ದರೂ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಮಾತ್ರ ಹೋಗಿಲ್ಲ.
ನೀರಿಗೆ ಸಮಸ್ಯೆ: ಪ್ರಸ್ತುತ ಒಂದು ಕೊಳವೆ ಬಾವಿಯಿಂದ ನೀರು ಸರಬರಾಜಾಗುತ್ತಿದ್ದು, ಇದನ್ನು ಆಸ್ಪತ್ರೆಯ ಸ್ವಚ್ಛತೆ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ. ಇನ್ನೂ ಇತ್ತೀಚೆಗೆ ಹೊಸದಾಗಿ 2 ಕೊಳವೆ ಬಾವಿಯನ್ನು ಕೊರೆಸಲಾಯಿತಾದರೂ ನೀರು ಸಿಕ್ಕಿಲ್ಲ.ಸದ್ಯಕ್ಕೆ ಸರ್ಕಾರದ ಅನುದಾನದಲ್ಲಿ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಕೈಗೊಂಡಿದ್ದು, ನೀರು ಶುದ್ಧೀಕರಣ ಉಪಕರಣಗಳಿಗೆ ನೀರು ಮಾತ್ರ ಸರಿಯಾಗಿ ಸರಬರಾಜಾಗುತ್ತಿಲ್ಲ. ಇಲ್ಲಿನವರ ನಿರ್ಲಕ್ಷ್ಯವೇ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಲು ಪ್ರಮುಖ ಕಾರಣವಾಗಿದೆ. ರೋಗಿಗಳು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದರೂ ಸಹ ಆಸ್ಪತ್ರೆ ಸಿಬ್ಬಂದಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ರೋಗಿಗಳು ಮತ್ತು ರೋಗಿಗಳು ಸಂಬಂಧಿಕರು ಪ್ರತಿನಿತ್ಯ ಪರದಾಡುತ್ತಿದ್ದಾರೆ. ಆಸ್ಪತ್ರೆ ಸಮೀಪದ ಹೊಟೇಲ್, ಕ್ಯಾಂಡಿಮೆಂಟ್ ಸೇರಿದಂತೆ ಇತರೆಡೆ ನೀರನ್ನು ತರಲು ಹೋಗುತ್ತಿದ್ದು, ಈ ಸಂದರ್ಭದಲ್ಲಿ ಬೈಗುಳವನ್ನೂ ಎದುರಿಸುತ್ತಿದ್ದಾರೆ.
ನೀರಿನ ದಾಹ ತಪ್ಪಿಸಿಕೊಳ್ಳಲು ಕೆಲವರು ಬಿಸ್ಲೇರಿ ಬಾಟಲ್ ಖರೀದಿಸುತ್ತಿದ್ದರೆ, ಬಹುತೇಕರು ಆಸ್ಪತ್ರೆಯಲ್ಲಿ ಸಿಗುವ ಉಪ್ಪು ನೀರನ್ನು ಬಾಟಲ್ಗಳಲ್ಲಿ ತುಂಬಿಸಿಕೊಂಡು ಕುಡಿಯುತ್ತಿದ್ದಾರೆ. ಇಲ್ಲವೇ ಸ್ಥಳೀಯರ ಮನೆಗಳಿಂದಲೇ ನೀರನ್ನು ತರುತ್ತಿದ್ದಾರೆ. ಇನ್ನೂ ಹೊಸದಾಗಿ ಬರುವವರು ಕುಡಿಯುವ ನೀರಿಗೆ ಆಸ್ಪತ್ರೆಯಲೆಲ್ಲಾ ಅಲೆದಾಡಿ ಅಲೆದಾಡಿ ಹೈರಾಣಾಗುತ್ತಿದ್ದು ನೀರು ಶುದ್ದೀಕರಣ ಉಪಕರಣಗಳಲ್ಲಿ ನೀರು ಬಾರದಿರುವುದರಿಂದ ಹತಾಶೆಗೊಂಡು ಸಿಕ್ಕ ಸಿಕ್ಕವರನ್ನು ನೀರಿಗಾಗಿ
ಅಂಗಲಾಚುತ್ತಾರೆ. ಇನ್ನು ಮುಂದಾದರೂ ಸಂಬಂಧಪಟ್ಟವರು ಜಿಲ್ಲಾಸ್ಪತ್ರೆಯ ನೀರಿನ ದಾಹ ನೀಗಿಸಲು ಮನ ಮಾಡಬೇಕಿದೆ.
ಎನ್.ವೆಂಕಟೇಶ್