ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಟೇಕಲ್ ನಿಲ್ದಾಣದಲ್ಲಿ ನಿಲ್ಲದ ರೈಲು: ಪ್ರಯಾಣಿಕರ ಆಕ್ರೋಶ

Rashmi Kasaragodu
Updated On : 5 Nov 2013, 12:44 pm

ಟೇಕಲ್ ಲಕ್ಷ್ಮೀಶ್
ಟೇಕಲ್: ಶತಮಾನಗಳ ಇತಿಹಾಸವಿರುವ, ಇಂಗ್ಲಿಷರ ಕಾಲದಲ್ಲಿ ಅಂದು ಕೆಜಿಎಫ್ ಚಿನ್ನದ ಗಣಿ ಕೆಲಸಕ್ಕಾಗಿ ತ್ವರಿತ ಗತಿಯಿಂದ ಸ್ಥಾಪನೆಗೊಂಡ ರೈಲು ಮಾರ್ಗ ಟೇಕಲ್ ರೇಲ್ವೆ ನಿಲ್ದಾಣ ಅಂದಿನಿಂದ ಇಂದಿವರೆಗೂ ತನ್ನದೇ ಆದ ವೈಶಿಷ್ಟ್ಯ
ಉಳಿಸಿಕೊಂಡಿದೆ. ಒಂದುವರೆ ವರ್ಷದ ಹಿಂದೆ ಅಂದಿನ ರೇಲ್ವೆ ಖಾತೆ ರಾಜ್ಯ ಸಚಿವ ಕೆ. ಎಚ್. ಮುನಿಯಪ್ಪ ಪ್ರಯತ್ನದ ಫಲವಾಗಿ ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ತಿರುಪತಿ ಪ್ಯಾಸೆಂಜರ್ ರೈಲನ್ನು ನಿಲುಗಡೆ ಮಾಡಲಾಯಿತು. ಆದರೆ ಇದೀಗ ಟೇಕಲ್ ರೈಲು ನಿಲ್ದಾಣದಲ್ಲಿ ಒಂದು ಸೂಚನಾಫಲಕ ಹಾಕಲಾಗಿದ್ದು ಅದರಲ್ಲಿ ಈ ವರ್ಷದ ಡಿಸೆಂಬರ್ 31ರವರೆಗೆ ತಿರುಪತಿ ಪ್ಯಾಸೆಂಜರ್ ರೈಲು ಟೇಕಲ್‌ನಲ್ಲಿ ನಿಲುಗಡೆ ಮಾಡಲಾಗುತ್ತಿದ್ದು, ಆನಂತರ ನಿಲುಗಡೆ ಇಲ್ಲವೆಂದು ಹೇಳಲಾಗಿದೆ. ಇದರಿಂದ ನಿತ್ಯ ಪ್ರಯಾಣಿಕರು ಕಂಗಾಲಾಗಿದ್ದಾರೆ.
ನಿತ್ಯ 3 ರಿಂದ 4 ಸಾವಿರ ಜನ ಓಡಾಟ: ಪ್ರತಿದಿನ ಟೇಕಲ್ ರೈಲು ನಿಲ್ದಾಣದಲ್ಲಿ ಮುಂಜಾನೆ 5 ಗಂಟೆಯಿಂದ ಸಂಜೆಯವರೆಗೆ ದಿನ-ಪ್ರತಿ 15 ರಿಂದ 20 ಪ್ಯಾಸೆಂಜರ್ ರೈಲುಗಳು ಹಾಗೂ 20 ರಿಂದ 25 ಎಕ್ಸ್‌ಪ್ರೆಸ್ ಓಡಾಡುತ್ತಿದ್ದು, 3 ರಿಂದ 4 ಸಾವಿರ ಜನ ಓಡಾಡುತ್ತಿದ್ದಾರೆ. ಇನ್ನೂ ಅಧಿಕ ಸಂಖ್ಯೆಯ ರೈಲನ್ನು ಹಾಕಿದರೆ ಉತ್ತಮ ಎಂಬುದು ನಿತ್ಯ ಪ್ರಯಾಣೀಕರ ಅಳಲಾಗಿದೆ.
ಪುಷ್‌ಫುಲ್ ರೈಲು ನಿಲುಗಡೆಗೆ ಒತ್ತಾಯ: ಇತ್ತೀಚೆಗಷ್ಟೇ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕೆಜಿಎಫ್ ನಿಂದ ಬೆಂಗಳೂರಿಗೆ ಪುಷ್‌ಫುಲ್ ಪ್ಯಾಸೆಂಜರ್ ರೈಲು ಉದ್ಘಾಟಿಸಿದ್ದರು. ಆದರೆ, ಕೆಲವು ರಾಜಕೀಯ ಹಿತಾಸಕ್ತಿಗಳ ಹಿಡಿತಕ್ಕೆ ಸಿಕ್ಕಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗದೆ ಓಡಾಡುತ್ತಿರುವುದು ವಿಪರ್ಯಾಸ. ಇದನ್ನು ಅರಿತ ಪ್ರಯಾಣಿಕರು ಒಂದು ಸಾವಿರಕ್ಕೂ ಹೆಚ್ಚು ಜನರ ಸಹಿಗಳನ್ನು ಸಂಗ್ರಹಿಸಿ ನಿಲುಗಡೆಗೆ ಆಗ್ರಹಿಸಿ ಬೆಂಗಳೂರು ರೇಲ್ವೆ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ ಅದೆಲ್ಲವೂ ಕಸದ ಬುಟ್ಟಿ ಸೇರಿತು.
ರಾಜಕೀಯ ದುರುದ್ದೇಶ: ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂಬುದು ಪ್ರಯಾಣಿಕರ ಗುಮಾನಿ. ಏನೇ ರಾಜಕೀಯ ಇದ್ದರೂ ಜನರಿಗೆ ನ್ಯಾಯ ದೊರಕಿಸಬೇಕೆಂಬುದು ಜನತೆಯ ಆಶಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement