ಪಟಾಕಿ ಸಿಡಿದು 15 ಜನರ ಕಣ್ಣಿಗೆ ಹಾನಿ
ಕೋಲಾರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಮಕ್ಕಳು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ದೃಷ್ಟಿ ದೋಷಕ್ಕೆ ಒಳಗಾಗಿದ್ದಾರೆ.
ನಗರದ ವಿವೇಕ ನೇತ್ರಾಲಯದಲ್ಲಿ 8 ಮಂದಿ, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ವರು ಹಾಗೂ ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಕಡೆ 15ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ವಿವೇಕ ನೇತ್ರಾಲಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಡಾ. ಮಂಜುನಾಥ್ ಅವರು, ತಮ್ಮಲ್ಲಿಗೆ ಬಂದ 8 ಜನರ ಪೈಕಿ ನಾಲ್ವರಿಗೆ ಸಣ್ಣಪುಟ್ಟ ತೊಂದರೆಯಾಗಿದ್ದರೆ ಉಳಿದ ನಾಲ್ವರಲ್ಲಿ ಕಾರ್ನಿಯಾಗೆ ಗಾಯವಾಗಿ ದೃಷ್ಟಿದೋಷ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಪಟಾಕಿ ಸಿಡಿಸುವಾಗ ಪಟಾಕಿಯೊಳಗಿನ ರಾಸಾಯನಿಕದಿಂದ ಮತ್ತು ಬೆಂಕಿಯಿಂದ ಎರಡೂ ರೀತಿಯ ಸಮಸ್ಯೆ ಎದುರಾಗುತ್ತದೆ ಎಂದು ಪತ್ರಕರ್ತರಿಗೆ ವಿವರಿಸಿದ್ದಾರೆ.
ಕಣ್ಣಿನ ಚಿಕಿತ್ಸೆಗೆ ಆಗಮಿಸಿದ್ದ ತಾಲೂಕಿನ ಪೂವಂಡಹಳ್ಳಿಯ ನಿವಾಸಿ ವೇವಾವತಿ ಎಂಬುವವರನ್ನು ಈ ಅನಾಹುತದ ಕುರಿತು ವಿಚಾರಿಸಿದಾಗ ತಮ್ಮ ಮಗಳಿಂದ ಪಟಾಕಿ ಹೊಡೆಸುತ್ತಿದ್ದ ಸಂದರ್ಭದಲ್ಲಿ ಬೆಂಕಿಯ ಕಿಡಿ ಕಣ್ಣಿಗೆ ತಾಕಿ ಈ ಸಮಸ್ಯೆಯಾಗಿದೆ ಎಂದು ಘಟನೆಯ ವಿವರ ನೀಡಿದರು.
ಮುಂಜಾಗ್ರತಾ ಕ್ರಮ ಇಲ್ಲದೆ ಪಟಾಕಿ ಸಿಡಿಸಬಾರದು, ಪೋಷಕರು ಮಕ್ಕಳಿಂದ ಅಪಾಯಕಾರಿ ಪಟಾಕಿ ಹೊಡೆಸುವುದು ತಪ್ಪು ಎಂದು ತಿಳಿಸಿದರು. ಇದೇ ರೀತಿ ನಗರದ ಶಂಕರ ಕಣ್ಣಿನ ಆಸ್ಪತ್ರೆಗೂ ಪಟಾಕಿ ಸಿಡಿತದಿಂದ ಗಾಯಗೊಂಡಿರುವ ನಾಲ್ವರು ಚಿಕಿತ್ಸೆಗಾಗಿ ಬಂದು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದಿದ್ದಾರೆಂದು ಆಸ್ಪತ್ರೆ ವೈದ್ಯ ಡಾ. ಶಂಕರನಾಯಕ್ ತಿಳಿಸಿದರು.