ಬಾಳೆ ಕಂದು ಕೇಳುವವರಿಲ್ಲದೆ ಕಳೆಗುಂದಿದ ವ್ಯಾಪಾರ...
ಗೌರಿಬಿದನೂರು: ಪ್ರತಿ ವರ್ಷದಂತೆ ಈ ಬಾರಿಯೂ ಬಾಳೆಕಂದು, ಮಾವಿನ ಎಲೆ ವ್ಯಾಪಾರಿಗಳು ಗ್ರಾಮೀಣ ಪ್ರದೇಶದ ರೈತಾಪಿ ವರ್ಗದಿಂದ ಬಾಳೆ ದಿಂಡು, ಮಾವಿನ ಎಲೆಗಳನ್ನು ಕಡಿಮೆ ದರಕ್ಕೆ ತಂದು ಪಟ್ಟಣ ನಗರ ಪ್ರದೇಶದಲ್ಲಿ ಮಾರಾಟ ಮಾಡಿ ಲಾಭ ಗಳಿಸುವುದು ವಾಡಿಕೆ. ಈ ಬಾರಿ ವ್ಯಾಪಾರಸ್ಥರು ತಂದ ಬಾಳೆಕಂದು, ಮಾವಿನ ಎಲೆ ವ್ಯಾಪಾರ ಕುಂದಿದ್ದು ತಂದ ಮಾಲಿನಲ್ಲಿ ಅರ್ಧ ಭಾಗದಷ್ಟೂ ಮಾರಾಟವಾಗಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ರೈತರು ಖುಷ್ಕಿ ಭೂಮಿಗಳಲ್ಲಿ ಬೇಸಾಯದ ಬೆಳೆಕೊಯ್ಲಿನಲ್ಲಿ ಮುಳುಗಿದ್ದು ಹಬ್ಬಕ್ಕೆ ಹೆಚ್ಚು ಆದ್ಯತೆ ನೀಡಿಲ್ಲ. ಪಟ್ಟಣ-ನಗರ ಪ್ರದೇಶದ ಜನರು ಮಾತ್ರ ಈ ಹಬ್ಬದ ವಸ್ತುಗಳಿಗೆ ಗ್ರಾಹಕರಾಗಿದ್ದು ಈ ಸಾಲಿನಲ್ಲಿ ಅನೇಕ ಕಾರಣಗಳಿಂದ ಅವರು ಸಹಾ ಕೊಳ್ಳಲು ಬರಲಿಲ್ಲ. ಕಳೆದ ವರ್ಷ 2 ಜತೆ ಬಾಳೆಕಂದು, ಮಾವಿನ ಎಲೆ 40 ರು.ಗಳಿಂದ 60 ರು. ಗಳವರೆಗೆ ಮಾರಾಟವಾಗಿತ್ತು. ಆದರೆ ಈ ಬಾರಿ 20 ರು. ಗಳಿಗೆ ಮಾರಾಟವಾಗುತ್ತಿದ್ದರೂ ಕೇಳುವವರೇ ಇಲ್ಲ.
ಈ ಸಾಲಿನ ದೀಪಾವಳಿ ಹಬ್ಬ ಕಳೆಕುಂದಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದ್ದರೂ, ದೀಪಾವಳಿ ಎಂದಾಕ್ಷಣ ಮಕ್ಕಳಿಗೆ ಖುಷಿ ನೀಡುವುದು ಪಟಾಕಿಗಳ ಅಬ್ಬರ. ಪೋಷಕರನ್ನು ಪೀಡಿಸಿ ಪಟಾಕಿಗಳನ್ನು ಸುಡುವುದರೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಈ ಬಾರಿ ಅನೇಕ ಸಂಘಸಂಸ್ಥೆಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಶಬ್ದ ವಾಯು ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಹಾಗೂ ಪಟಾಕಿ ಬೆಲೆಯೂ ಸಹ ಕಳೆದ ಸಾಲಿಗಿಂತ ದುಪ್ಪಟ್ಟು ಬೆಲೆಯಾಗಿರುವುದರಿಂದ ಪಟಾಕಿಗಳ ವ್ಯಾಪಾರವೂ ಕಡಿಮೆ ಯಾಗಿದೆ ಎಂದು ಪಟಾಕಿ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪಟಾಕಿಗಳ ಅಬ್ಬರಕ್ಕೆ ತಮ್ಮ ಕಣ್ಣುಗಳನ್ನು ಕಳದುಕೊಂಡ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಯಾಗಿರುವುದು ಸಂತಸದ ವಿಷಯ.