ರಾಜಕಾಲುವೆ ರಾಜಾರೋಷ ಒತ್ತುವರಿ
ಬಂಗಾರಪೇಟೆ: ಪಟ್ಟಣದಲ್ಲಿ ಸರ್ಕಾರಿ ಜಾಗವನ್ನು ಹಾಗೂ ರಾಜಕಾಲುವೆಗಳನ್ನು ನಾಗರಿಕರು ಯಾವುದೇ ಮುಲಾಜಿಲ್ಲ ಮತ್ತು ಅಂಜಿಕೆಯಿಲ್ಲದೆ ನಿರಂತರವಾಗಿ ಒತ್ತುವರಿ ಮಾಡಿಕೊಂಡು ಮಾರಾಟ ಮಾಡುತ್ತಿರುವುದರಿಂದ ಪಟ್ಟಣದಲ್ಲಿ ನಿವೇಶಗಳ ಬೆಲೆ ದಿನೇ ದಿನೆ ಗಗನಕ್ಕೇರುತ್ತಿದೆ.
ಇಲ್ಲಿನ ದೊಡ್ಡ ಕೆರೆಗೆ ಮಳೆ ನೀರು ಸರಾಗವಾಗಿ ಹರಿಯಲು ಇರುವ ರಾಜರಾಲುವೆಗಳು ಇಂದು ದುರ್ಬೀನು ಹಾಕಿ ಹುಡುಕಿದರೂ ಕಾಣಿಸುವುದಿಲ್ಲ ಎಲ್ಲಾ ಕಡೆ ಒತ್ತುವರಿಯಾಗಿದೆ.
ಇನ್ನೂ ಕೆಲವು ಕಡೆ ತ್ಯಾಜ್ಯ ವಸ್ತುಗಳನ್ನು ಹಾಕುವ ಮೂಲಕ ಮುಚ್ಚುವ ಪ್ರಯತ್ನ ಸಹ ನಿರಂತರವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ತಾಲೂಕು ಆಡಳಿತವಾಗಲಿ ಅಥವಾ ಪುರಸಭೆ ಅಧಿಕಾರಿಗಳಾಗಲಿ ಇದರ ಬಗ್ಗೆ ಗಮನಗರಿಸದ ಕಾರಣ ಇದನ್ನೇ ನೆಪವಾಗಿಟ್ಟಿಕೊಂಡು ರಿಯಲ್ ಎಸ್ಟೇಟ್ ದೊರೆಗಳು ರಾತ್ರೋ ರಾತ್ರಿ ಖಾಲಿಯಿರುವ ಸರ್ಕಾರಿ ಜಾಗಗಳನ್ನು ಮುಚ್ಚಿ ಸಮತೊಟ್ಟು ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಸರ್ಕಾರಿ ಜಾಗ ಒತ್ತುವರಿ ಮಾಡಿಕೊಳ್ಳುವುದು ಅಪರಾಧ ಎಂಬ ಪ್ರಜ್ಞೆ ಸಹ ಇಲ್ಲ. ಇದರಿಂದ ಪಟ್ಟಣದಲ್ಲಿ ಸಾಮಾನ್ಯ ನಿವೇಶನ ಸಹ ಬಡವರಿಗೆ ಸಿಗುತ್ತಿಲ್ಲ 20-40 ನಿವೇಶನಕ್ಕೆ ಕನಿಷ್ಠವೆಂದರೂ 16ರಿಂದ 20ಲಕ್ಷ ಕೊಡಬೇಕು.
ಸಣ್ಣ ನೀರಾವರಿ ಇಲಾಖೆ ಮೌನ: ದೊಡ್ಡಕೆರೆಗೆ ಸಂಪರ್ಕವಿರುವ ಎಲ್ಲಾ ರಾಜಕಾಲುವೆಗಳೂ ಒತ್ತುವರಿಯಾಗಿದೆ ಯಾಗುತ್ತಲೆ ಇವೆ. 8ವರ್ಷಗಳಿಂದ ಮಳೆರಾಯ ಬೇರೆ ಪಟ್ಟಣದ ಮೇಲೆ ಮುನಿಸಿಕೊಂಡಿರುವುದರಿಂದ ಒತ್ತುವರಿದಾರರಿಗೆ ಅನುಕೂಲವಾಗಿದೆ.
ಕೆರೆಕೋಡಿಗೆ ಹೋಗುವ ದಾರಿ ಮದ್ಯ ಸಿಗುವ ರಾಜಕಾಲುವೆಯಲ್ಲಿ ನಾಗರಿಕರು ತಮ್ಮ ಮನೆಗಳ ತ್ಯಾಜ್ಯ ವಸ್ತುಗಳನ್ನು ಬಿಸಾಡುತ್ತಿರುವುದರಿಂದ ಕಾಲುವೆ ಮುಚ್ಚಿ ಹೋಗಿದೆ ಮಳೆ ನೀರು ಯಾವ ದಿಕ್ಕಿಗೂ ಹೋಗಲಾಗದಷ್ಟು ಮುಚ್ಚಿಲಾಗಿದೆ.
ಇತ್ತೀಚಿಗೆ ಬಿದ್ದ ಮಳೆಗೆ ಕಾಲುವೆಯಲ್ಲೇ ನೀರು ನಿಂತು ಅದರಿಂದ ಸೊಳ್ಳೆಗಳು ಉತ್ಪತ್ತಿ ಹೆಚ್ಚಾಗಿ ಕೆರೆಕೋಡಿ ಗ್ರಾಮದಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಹರಡಿ ಜನರನ್ನು ಭಾದಿಸುತ್ತಿದೆ. ಪುರಸಭೆ ರಾಜಕಾಲುವೆ ಪಕ್ಕದಲ್ಲೆ ಕಸ ಸಂಗ್ರಹಣೆಗೆ ಕಂಟೈನರ್ ಇಟ್ಟಿದ್ದರೂ ಸಹ ಜನರು ಕಾಲುವೆಯಲ್ಲೇ ಕಸ ಹಾಕುವುದರಿಂದ ಈ ಪ್ರದೇಶದ ಸುತ್ತಮುತಲಿನ ಜನರಿಗೆ ಕಿರಿಕಿರಿಯಾಗಿದೆ. ರಾಜಕಾಲುವೆ ಮುಚ್ಚಿ ಮನೆಗಳನ್ನು ಕಟ್ಟಿಕೊಂಡಿದ್ದರೂ ನೀರಾವರಿ ಇಲಾಖೆ ಮೌನವಹಿಸಿದೆ.
ಕೇಳುವವರೇ ದಿಕ್ಕಿಲ್ಲದಂತಾಗಿದೆ: ಇದೇ ರೀತಿಯಲ್ಲಿ ಪಟ್ಟಣ ಸುತ್ತಮುತ್ತಲೂ ರಾಜಕಾಲುವೆಗಳು ಒತ್ತುವರಿಯಾಗಿದ್ದರೂ ಕೇಳುವವರೇ ದಿಕ್ಕಿಲ್ಲದಂತಾಗಿದೆ. ಈ ಹಿಂದಿನ ತಾಲೂಕು ಅಡಳಿತ ಹಿಡಿತವಿಲ್ಲದೆ ಅದಗೆಟ್ಟಿತ್ತು ಇದಕ್ಕೆ ಮೇಜರ್ ಸರ್ಜರಿ ಮಾಡಿ ಹೊಸ ಆಯಾಮ ನೀಡುವುದಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳುತ್ತಿದ್ದಾರೆ. ರಾಜಕಾಲುವೆಗಳನ್ನು ರಕ್ಷಿಸುವ ಕಾರ್ಯಕ್ಕೆ ಶಾಸಕರು ಕೈಹಾಕಬೇಕು ನಂತರ ಕೆರೆಗಳಲ್ಲಿ ತುಂಬಿರುವ ಹೂಳನ್ನು ಎತ್ತಿ ಅಂತರ್ಜಲ ಸುಧಾರಣೆಗೆ ಶ್ರಮಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.